ಬೆಳಗಾವಿ: ಗೋಕಾಕ್ ಕೆಪಿಟಿಸಿಎಲ್ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲೆಕ್ಟ್ರಾನಿಕ್ ಡಿವೈಸ್ ಸೇರಿ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮತ್ತೋರ್ವ ಆರೋಪಿಯನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಬೆಂಗಳೂರಿನ ದೇವಸಂದ್ರ ಮೂಲದ ಮೊಹಮ್ಮದ ಅಜೀಮುದ್ದಿನ್ (37) ಬಂಧಿತ ಆರೋಪಿ.
ಗೋಕಾಕ್ ನಲ್ಲಿ ಆ.7 ರಂದು ಹೆಸ್ಕಾಂ ನೇಮಕಾತಿ ಪರೀಕ್ಷಾ ಅಕ್ರಮ ಬಯಲಿಗೆ ಬಂದಿತ್ತು. ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸರು ಈವರೆಗೆ 17 ಆರೋಪಿಗಳನ್ನು ಬಂಧಿಸಿದ್ದಾರೆ. ಪರೀಕ್ಷಾ ಅಕ್ರಮ ನಡೆಸಲು ಬೇಕಾಗುವ ವಿವಿಧ ಬಗೆಯ ಇಲೆಕ್ಟ್ರಾನಿಕ್ ಡಿವೈಸ್ ಗಳನ್ನು ದೆಹಲಿ ಮತ್ತು ಹೈದರಾಬಾದ್ ದಿಂದ ತಂದು ಸಂಜು ಭಂಡಾರಿ ಹಾಗೂ ಬೆಳಗಾವಿ ಜಿಲ್ಲೆಯ ಬೇರೆ ಜನರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಬಂಧಿತನಿಂದ ಎರಡು ಮೊಬೈಲ್ ಮತ್ತು ವಿವಿಧ ಬಗೆಯ 179 ಇಲೆಕ್ಟ್ರಾನಿಕ್ ಡಿವೈಸಗಳು, ಇಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ 7 ಎನ್ 95 ಮಾಸ್ಕ್, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ 41 ಬನಿಯನ್, ವಿವಿಧ ಬಗೆಯ 445 ಇಲೆಕ್ಟ್ರಾನಿಕ್ ಇಯರ್ ಪಿಸ್, ವಿವಿಧ ಬಗೆಯ 554 ಚಾರ್ಜಿಂಗ್ ಕೇಬಲ್ ಹಾಗೂ 06 ವಾಕಿಟಾಕಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.