ಮೊಗೆಹಳ್ಳದ ಬಳಿ ಬಸ್-ಟಿಪ್ಪರ್ ಡಿಕ್ಕಿ.! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ ಮೊಗೆಹಳ್ಳದ ಬಳಿ ಬಸ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಸ್ಥಳದಲ್ಲಿ ತಿರುವಿನಲ್ಲಿ ರಸ್ತೆ 2 ಕವಲೊಡೆದು ಮುಂದೆ ಸೇರುತ್ತದೆ. ಬಸ್ ಚಾಲಕ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಬಸ್ ಮುಂಭಾಗ ಜಖಂಗೊಂಡಿದ್ದು, ಟಿಪ್ಪರ್ ವಾಹನಕ್ಕೂ ಹಾನಿಯಾಗಿದೆ.

ಅದೆಷ್ಟೋ ಬಾರಿ ಒಮ್ಮುಖವಾಗಿ ಒಂದೇ ಸಲ ಎರಡು ರಸ್ತೆಯಲ್ಲಿ ವಾಹನ ಗಳು ಸಂಚರಿಸುತ್ತವೆ. ಇದರಿಂದ ಅನೇಕ ದುರ್ಘಟನೆಗಳು ನಡೆದು, ಸಾವು ನೋವು ಸಂಭವಿಸಿತ್ತು. ಇಷ್ಟಾದರೂ ಇಲ್ಲಿನ ಪಂಚಾಯಿತಿಯಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.