ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಹಲವು ಭಾಗದಲ್ಲಿ ನಿರಂತರ ಭೂ ಕುಸಿತ ಸಂಭವಿಸುತ್ತಿದೆ. ಭೂ ಕುಸಿತ ತಡೆಯಲು ಇದೀಗ ಅರಣ್ಯ ಇಲಾಖೆ ಡ್ರೋನ್ ಮೂಲಕ ಗುಡ್ಡ ಕುಸಿತ ಭಾಗದಲ್ಲಿ ಬೀಜ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಣಶಿ ಘಟ್ಟ, ಕುಮಟಾ ಘಟ್ಟಭಾಗ, ಹೊನ್ನಾವರ, ಭಟ್ಕಳದ ಗುಡ್ಡ ಕುಸಿತ ಭಾಗದಲ್ಲಿ ಪ್ರಾಯೋಗಿಕವಾಗಿ ಬೀಜಗಳನ್ನು ದ್ರೋಣ್ ಮೂಲಕ ಬಿತ್ತಲು ಅರಣ್ಯ ಇಲಾಖೆ ಮುಂದಾಗಿದೆ.
ಕುಮಟಾ ಭಾಗದಲ್ಲಿ ಪ್ರಾಯೋಗಿಕ ಚಾಲನೆ.!
ಕುಮಟಾ ಭಾಗದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಭಾಗದಲ್ಲಿರುವ ಗುಡ್ಡಗಳನ್ನು ತೆರವು ಮಾಡಲಾಗಿದ್ದು ಈ ಭಾಗದಲ್ಲಿ ಇದೀಗ ಮಳೆಯಿಂದ ಗುಡ್ಡಭಾಗದಲ್ಲಿ ಕುಸಿತ ಕಂಡಿದೆ. ಇದಲ್ಲದೇ ಈ ಭಾಗಕ್ಕೆ ತೆರಳಿ ಸಸಿಗಳನ್ನು ನೆಡಲು ಕಷ್ಟಸಾಧ್ಯವಾಗಿದೆ. ಹೀಗಾಗಿ ಇಂದು ದೀವಗಿ ಮತ್ತು ಮಿರ್ಜಾನ್ ಹೆದ್ದಾರಿ ಪ್ರದೇಶದ ಸುತ್ತಮುತ್ತಲ ಗುಡ್ಡಭಾಗದಲ್ಲಿ ಅರಣ್ಯ ಇಲಾಖೆ ನಾಲ್ಕು ಸಾವಿರ ಬೀಜಗಳನ್ನು ಒಟ್ಟು 2.01 ಹೆಕ್ಟೇರ್ ಪ್ರದೇಶದಲ್ಲಿ ದ್ರೋಣ್ ಮೂಲಕ ಬಿತ್ತನೆ ಮಾಡಲಾಯಿತು.
ಬಿತ್ತನೆ ಮಾಡಿದ ಬೀಜಗಳು ಯಾವುದು ವಿಶೇಷ ಏನು.?
4000 ಬೀಜಗಳನ್ನು ಇಂದು ಕುಮಟಾ ಭಾಗದ ಘಟ್ಟ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು ಇವುಗಳಲ್ಲಿ ತಾರೆ, ಮುರುಗಲು, ಅಂಟವಾಳ, ಮತ್ತಿ, ಹಲಸು, ಶಿವನಿ, ಸಾಗವಾನಿ, ಮಾವು ತಳಿಗಳು ಸೇರಿವೆ. ಇವುಗಳು ಈ ಭಾಗದಲ್ಲಿ ಹೆಚ್ಚು ಗಟ್ಟಿಯಾಗಿ ಆಳದಲ್ಲಿ ಬೇರೂರಿ ಮಣ್ಣು ಸವಕಳಿಯನ್ನು ತಡೆಯುತ್ತವೆ. ಇದರಿಂದ ಮಳೆಗಾಲದಲ್ಲಿ ಹರಿದುಹೋಗುವ ನೀರು ಮಣ್ಣಿನ ಸವಕಳಿ ತಡೆದು ಭೂ ಕುಸಿತವಾಗುವುದನ್ನು ತಡೆಯುತ್ತವೆ. ಹೀಗಾಗಿ ಈ ಭಾಗದಲ್ಲಿ ಈ ಬೀಜಗಳನ್ನು ದ್ರೋಣ್ ಮೂಲಕ ಬಿತ್ತನೆ ಮಾಡಲಾಗುತ್ತಿದೆ.
ಇಂದು ಕುಮಟಾ ದಲ್ಲಿ ಡಿ.ಸಿ.ಎಫ್ ಪ್ರಶಾಂತ್ ನೇತೃತ್ವದಲ್ಲಿ ಎ.ಸಿ.ಎಫ್ ಜಿಕೆ ಶೇಟ್, ಎ.ಸಿ.ಎಫ್ ಸುಂದರೇಶ್, ಆರ್.ಎಫ್.ಓ ಪ್ರವೀಣ್ ರವರ ತಂಡದಿಂದ ಮೊದಲ ಬಾರಿ ಭೂ ಕುಸಿತ ತಡೆಯಲು ದ್ರೋಣ್ ಮೂಲಕ ಬೀಜ ಬಿತ್ತನೆ ಕಾರ್ಯ ನಡೆಸಲಾಯಿತು.