ಬ್ರಿಟನ್ ರಾಣಿ 2 ನೇ ಎಲಿಜಬೆತ್ ನಿಧನ: ಪ್ರಧಾನಿ ಮೋದಿ ಸಂತಾಪ

ಲಂಡನ್: ಬ್ರಿಟನ್ ರಾಣಿ 96 ವರ್ಷದ 2 ನೇ ಎಲಿಜಬೆತ್ ಗುರುವಾರ ನಿಧರಾಗಿದ್ದಾರೆ. ಬ್ರಿಟಿಷ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ ಅವರದು. ಬ್ರಿಟನ್‌ನಲ್ಲಿ ರಾಣಿಯ ಗೌರವಾರ್ಥ 10 ದಿನ ರಾಷ್ಟ್ರೀಯ ಶೋಕವನ್ನು ಘೋಷಿಸಲಾಗಿದೆ.

ಗುರುವಾರ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದರ ಹಿನ್ನೆಲೆ ವೈದ್ಯರ ನಿಗಾದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳದಿದ್ದಾರೆ ಎಂದು ಬಂಕಿಂಗ್‌ಹ್ಯಾಮ್‌ ಅರಮನೆ ತಿಳಿಸಿದೆ. ರಾಣಿಯ ನಿಧನದ ಸುದ್ದಿ ತಿಳಿದ ನಂತರ ಅವರ ಹಿರಿಯ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಸಹಿತ ಕುಟುಂಬಸ್ಥರು ರಾಣಿ ಎಲಿಝಬೆತ್ ತಂಗಿದ್ದ ಅರಮನೆಗೆ ಆಗಮಿಸಿದ್ದಾರೆ. ರಾಣಿಯ ಪಾರ್ಥಿವ ಶರೀರವನ್ನು ಬಾಲ್‌ಮೊರಲ್‌ ಎಸ್ಟೇಟ್‌ನಲ್ಲಿ ಇಡಲಿದ್ದು, ಶುಕ್ರವಾರ ಲಂಡನ್‌ಗೆ ಒಯ್ಯಲಾಗುವುದು ಎಂದು ಅರಮನೆಯ ಹೇಳಿಕೆ ತಿಳಿಸಿದೆ.

ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಮ್ಮ ಕಾಲದ ಧೀಮಂತ ನಾಯಕಿಯಾಗಿ ಸದಾ ನೆನಪಿನಲ್ಲುಳಿಯಲಿದ್ದಾರೆ. ಅವರು ತಮ್ಮ ದೇಶದ ಜನರಿಗೆ ಸ್ಫೂರ್ತಿದಾಯಕ ನಾಯಕತ್ವವನ್ನು ನೀಡಿದ್ದರು. ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯಿಂದ ಇದ್ದವರು. ಅವರ ಕುಟುಂಬದ ಮತ್ತು ಬ್ರಿಟನ್‌ ಜನರ ಈ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ, ಅವರ ಜತೆ ನಾವಿದ್ದೇವೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ರಾಣಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಅಲ್ಲದೇ 2ನೇ ಎಲಿಜಬೆತ್ ನಿಧನಕ್ಕೆ ಕೇಂದ್ರ ಸಚಿವ ಪೀಯೂಷ್ ಗೋಯಲ್, ಹರ್ದೀಪ್‌ ಸಿಂಗ್ ಪುರಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.