ಮುಂಡಗೋಡ: ಬಾಚಣಕಿ ಗ್ರಾಮದಲ್ಲಿ ಸರ್ವೇ ನಂಬರ 133/2 ರಲ್ಲಿ ಇದ್ದ 3 ಎಕರೆ 29 ಗುಂಟೆ ಜಮೀನಿನ ಎರಡು ಕುಟುಂಬಗಳ ವಿವಾದ ನ್ಯಾಯಾಲಯದಲ್ಲಿ ಯಥಾಸ್ಥಿತಿ ಕಾಪಾಡುಕೊಳ್ಳುವಂತೆ ಆದೇಶಿಸಿದ್ದರು. ಆದರೆ ಪೊಲೀಸ್ ನಿರೀಕ್ಷಕರು ಒಬ್ಬರ ಪರವಾಗಿ ನಿಂತು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಸಿಪಿಐ ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿ ತಹಶೀಲ್ದಾರ ಕಚೇರಿಯ ಎದುರು ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಧರಣೆ ಸತ್ಯಾಗ್ರಹ ಆರಂಭಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ತಹಶೀಲ್ದಾರ ಶಂಕರ್ ಗೌಡಿ, ನಿಮ್ಮ ಸಮಸ್ಯೆಗಳನ್ನು ನ್ಯಾಯಾಲಯದ ಆದೇಶದಂತೆ ಸಿಪಿಐ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ. ಮನೆ ಕೆಡವಿ ಅಲ್ಲಿಯ ಸಾಮಗ್ರಿಗಳನ್ನು ಯಾರು ಪಡೆದುಕೊಂಡಿದ್ದಾರೊ ಅವರಿಂದ ಸಾಮಗ್ರಿಗಳನ್ನು ಮರಳಿ ಕೊಡಿಸ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್ ಪಕ್ಕಿರಪ್ಪ ದೂರು
ಪೊಲೀಸ್ ಠಾಣೆಯಲ್ಲಿ ಹಣ ಇದ್ದ ಶ್ರೀಮಂತರಿಗೆ ಮಾತ್ರ ನ್ಯಾಯ ಸಿಗುತ್ತದೆ. ಪೋಲಿಸ್ ಠಾಣೆ ಭ್ರಷ್ಟಾಚಾರ ಠಾಣೆಯಾಗಿದೆ. ವಾಸ್ತವ್ಯ ಮಾಡುತ್ತಾ ಬಂದ ಮನೆಯನ್ನು ಕೆಡವಿ ಕಳವು ಮಾಡಲು ಮತ್ತು ವಿವಾದಿತ ಜಮೀನು ಬೇಸಾಯ ಮಾಡಲು ಹಣದ ಆಸೆಗೆ ಸಹಾಯ ಮಾಡಿ ಎರಡು ಕುಟುಂಬದವರ ಹತ್ತಿರ ರಾಜಿ ಸಂಧಾನ ಮಾಡುವುದಾಗಿ ಹೇಳಿ ಏಜೆಂಟರ ಮೂಲಕ 6 ಲಕ್ಷ ಹಣ ಪಡೆದ ಸಿಪಿಐ ಎಸ್.ಎಸ್.ಸಿಮಾನಿ ಅವರನ್ನು ಅಮಾನತ್ತನಲ್ಲಿಟ್ಟು ಆರೋಪಿಗಳನ್ನು ಕೂಡಲೇ ಬಂದಿಸಿ. ವಿವಾದಿತ ಜಮೀನನ್ನು ಯಾರೂ ಉಳುಮೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸಲು ಆದೇಶ ನೀಡಿ ಈ ಪ್ರಕರಣವನ್ನು ಉನ್ನತ ಮಟ್ಟದ ದಕ್ಷ ಅಧಿಕಾರಿಗಳಿಂದ ತನಿಖೆ ಮಾಡಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಸಂಘಟನೆಯಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ
ಬಾಚಣಕಿ ಗ್ರಾಮದಲ್ಲಿ ಗುಳ್ಳಪ್ಪ ಕುರಬರ್ ಇವರ ತಂದೆಯ ಹೆಸರಿಗೆ 3 ಎಕರೆ 29 ಗುಂಟೆ ಜಮೀನು ಇದ್ದು ಈ ಜಮೀನನ್ನು ಬಡ್ಡಿ ವ್ಯವಹಾರದಲ್ಲಿ ಗುಳಪ್ಪ ಇವರ ತಂದೆ ಸಿದ್ದಪ್ಪ ಬೀರಪ್ಪ ಕುರಬರ ಇವರಿಗೆ ಮೋಸ ಮಾಡಿ ಜಮೀನನ್ನು ಒತ್ತೆ ಪತ್ರ ಅಂತಾ ಹೇಳಿ ಮೋಸದಿಂದ ಕ್ರಯ ಪತ್ರ ಮಾಡಿಸಿಕೊಂಡ ವಿನಾಯಕ ಶೇಠ, ಮಾರುತಿ ಕಾಂಬಳೆ, ಮಲ್ಲಪ್ಪ ಕಾಂಬಳೆ, ಪ್ರಕಾಶ ಕಾಂಬಳೆ, ಅಂದಾನೆಪ್ಪ ಕಾಂಬಳೆ ಕ್ರಯ ಪತ್ರ ಮಾಡಿಸಿಕೊಂಡು ಕುಟಂಬದವರಿಗೆ ಅನ್ಯಾಯ ಮಾಡಿದ ಬಗ್ಗೆ ನ್ಯಾಯಾಲಯದಲ್ಲಿ ದಾವಾ ಇದ್ದು ಈ ಪ್ರಕರಣದಲ್ಲಿ ವಿವಾದಿತ ಜಮೀನಿನಲ್ಲಿ ಯಥಾಸ್ಥಿತಿ ಕಾಯ್ದುಕೊಡು ಯಾರೂ ಉಳುಮೆ ಮಾಡಬಾರದೆಂದು ಎರಡೂ ಕಡೆಯವರಿಗೆ ನ್ಯಾಯಾಲಯ ಆದೇಶ ಮಾಡಿರುತ್ತದೆ.
ಪೊಲೀಸರು ನ್ಯಾಯಾಲಯದ ಆದೇಶವನ್ನು ಪಾಲಿಸದೇ ಉಲ್ಲಂಘಿಸಿದ್ದಾರೆ. ಅಲ್ಲದೇ ಸೆಪ್ಟೆಂಬರ್ 6 ರಂದು ಜಮೀನಿನಲ್ಲಿದ್ದ ಗುಳಪ್ಪ ಮನೆಯನ್ನು ಕೆಡವಿ ಹಾಕಿ ಅದರ ಹಂಚು ಸೇರಿದಂತೆ ವಿವಿಧ ಸಾಮಗ್ರಿಗಳು, ಮತ್ತು ಕೃಷಿ ಉಪಕರಣಗಳನ್ನು 5 ಜನ ಆರೋಪಿತರು ಕಳವು ಮಾಡಿಕೊಂಡು ಹೋಗಿದ್ದಾರೆ. ಯಥಾಸ್ಥಿತಿ ಕಾಯ್ದಕೊಳ್ಳಲು ಕೋರ್ಟ್ ಆದೇಶ ಇರುವ ಜಮೀನು ಉಳುಮೆ ಮಾಡಿ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಉಲ್ಲಂಘನೆ ಮಾಡಿದ್ದಾರೆ. ಈ ಕುರಿತು ಕೂಡಲೆ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಬಸವರಾಜ ಎಚ್ ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.