ಶಿರಸಿ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾನಿಗೊಂಡಿದ್ದ ತಾಲೂಕಿನ ಬರೂರಿನ ರಸ್ತೆಯ ಸಿಡಿ ಹಾನಿಗೊಂಡಿದ್ದ ಸ್ಥಳಕ್ಕೆ ವಿಧಾನಸಭಾಧ್ಯಕ್ಷರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಳವೆ ಗ್ರಾಪಂ ವ್ಯಾಪ್ತಿಗೆ ಬರುವ ಬರೂರು ಗ್ರಾಮಕ್ಕೆ ತೆರಳುವ ರಸ್ತೆ ಮಳೆಯಿಂದ ಕಚ್ಚಾ ರಸ್ತೆಯಾಗಿದ್ದು, ಸಿಡಿಯೂ ಹಾನಿಗೀಡಾಗಿದೆ. ಕಾರಣ ಸ್ಥಳೀಯ ವಾರ್ಡ್ ಸದಸ್ಯ ಸಂದೇಶ ಭಟ್ ಬೆಳಖಂಡ ಅವರ ಕೋರಿಕೆಯ ಮೇರೆಗೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಿಡಿ ಪುನರ್ ನಿರ್ಮಾಣಕ್ಕೆ ಅಂದಾಜು 10 ಲಕ್ಷ ರೂ. ಅಗತ್ಯವಿದ್ದು, ಅತಿವೃಷ್ಟಿ ಅನುದಾನದಲ್ಲ ಹಣ ಮಂಜೂರು ಮಾಡುವಂತೆ ವಿನಂತಿಸಲಾಯಿತು. ಇದಲ್ಲದೇ ಬರೂರಿನ ರಸ್ತೆಯ ಪಕ್ಕದಲ್ಲಿ ಧರೆ ಕುಸಿದಿದ್ದು, ಅಲ್ಲೂ ತಡೆಗೋಡೆ ನಿರ್ಮಾಣ ಆಗಬೇಕು ಎಂದು ಮನವಿ ಮಾಡಿದರು.
ಸ್ಥಳದಲ್ಲೇ ಇದ್ದ ಗುತ್ತಿಗೆದಾರ ಎನ್.ವಿ.ಹೆಗಡೆ ಬಳಿ ಅಂದಾಜು ಲೆಕ್ಕ ಕೇಳಿದ ಕಾಗೇರಿ ರಸ್ತೆ ಮತ್ತು ಸಿಡಿ ನಿರ್ಮಾಣದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಧರ ಮುಂದಲಮನಿ, ಗ್ರಾಪಂ ಅಧ್ಯಕ್ಷ ವಿನಯ ಭಟ್, ಪಿಡಿಒ ಸರೋಜಾ ನಾಯಕ, ಸದಸ್ಯ ಶ್ರೀನಾಥ ಶೆಟ್ಟಿ, ಉಂಚಳ್ಳಿ ಗ್ರಾ.ಪಂ ಸದಸ್ಯ ರವಿತೇಜ ರೆಡ್ಡಿ ಮುಂತಾದವರು ಇದ್ದರು.