ಶಿಕ್ಷಣದ ಜೊತೆಗೆ ಉತ್ತಮ ನಡತೆಯೂ ಅವಶ್ಯಕ – ಎನ್. ಎಫ್. ನೋರೋನ್ಹಾ

ಕಾರವಾರ: ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಕುರಿತು ಮಕ್ಕಳಲ್ಲಿ ಸ್ಪರ್ಧಾತ್ಮಕ ಭಾವನೆ ಮೂಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕಾರವಾರ ತಾಲೂಕಾ ದಂಡಾಧಿಕಾರಿ ಎನ್.ಎಫ್ ನೋರೋನ್ಹಾ ಹೇಳಿದರು. ಇಲ್ಲಿನ ಆಜಾದ್ ಯೂಥ್ ಕ್ಲಬ್ ವತಿಯಿಂದ ನಗರದಲ್ಲಿ ಸೋಮವಾರ ಶಿಕ್ಷಕ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳು ಹೆಚ್ಚು ಹೆಚ್ಚು ಅಂಕ ಗಳಿಸಿ ಉನ್ನತ ಶಿಕ್ಷಣವನ್ನು ಪಡೆದು ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮಕ್ಕಳ ಭವಿಷ್ಯದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿದೆ. ಶಿಕ್ಷಣದ ಜೊತೆಗೆ ಉತ್ತಮ ನಡತೆಯೂ ಅವಶ್ಯಕ ಎಂದು ಹೇಳಿದರು.

ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ನ ಸಂಸ್ಥಾಪಕ ಜಾರ್ಜ್ ಫರ್ನಾಂಡೀಸ್ ಮಾತನಾಡಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಸೇವೆ ಮಾಡುವುದು ನಮ್ಮ ಕರ್ತವ್ಯ. ಶಿಕ್ಷಣವು ನಮ್ಮ ಶಾಶ್ವತ ಆಸ್ತಿ. ನಮಗೆ ಶಿಕ್ಷಣ ನೀಡಿದ ಶಿಕ್ಷಕರನ್ನು ನಾವು ಸದಾ ಗೌರವಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಗ್ರಾಮೀಣ ವಿಭಾಗದಲ್ಲಿಯೇ 37 ವರ್ಷ ಸೇವೆ ಸಲ್ಲಿಸಿ ತಾಲೂಕಿನ ಹರೂರಿನ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಿವೃತ್ತಿಯಾದ ಶಿಕ್ಷಕಿ ಪುಷ್ಪಾ ಸದಾನಂದ ನಾಯ್ಕ ಅವರನ್ನು ಹಾಗೂ ಎಸ್.ಎಸ್.ಎಲ್.ಸಿ ಯಲ್ಲಿ ಶೇ. 99.84 ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸೇಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿ ಗಣೇಶ್ ಶಂಕರ ರಾಯ್ಕರ ಈ ಇಬ್ಬರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಿಧಿ ನಾಯಕ, ಮಾಜಿ ಅಧ್ಯಕ್ಷ ರೋಹನ ಭುಜಲೆ, ಮೊಹಮ್ಮದ್ ಹಸನ್, ಸದಾನಂದ ನಾಯ್ಕ ಮುಂತಾದವರು ಇದ್ದರು.