ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ ಸದಾ ಕ್ಷೇತ್ರದ ಅಭಿವೃದ್ಧಿ ಜನರ ಸಮಸ್ಯೆ ನಿವಾರಣೆಗಾಗಿ ಕ್ಷೇತ್ರದ ಉದ್ದಗಲಕ್ಕೂ ಓಡಾಟ ನಡೆಸುವ ವಿಷಯ ಸರ್ವೆ ಸಾಮಾನ್ಯ. ವಿಧಾನಸಭೆ ಕಲಾಪದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಧ್ವನಿ ಎತ್ತುವ ಮೂಲಕ ಅಪಾರ ಅನುದಾನವನ್ನು ತಂದಿದ್ದಾರೆ. ಆದರೆ, ಈಗ ಅವರು ಗಣೇಶ ಭಜನೆ ಮಾಡುತ್ತ, ಗುಮ್ಮಟೆ ವಾದ್ಯದೊಂದಿಗೆ ಮನೆ ಮಾತಾಗಿದ್ದಾರೆ.
ಹೌದು.! ಶನಿವಾರದಂದು ತಾಲ್ಲೂಕಿನ ಚೆಂಡಿಯಾ ಗ್ರಾಮದ ಐಸ್‌ಫ್ಯಾಕ್ಟರಿ ಮನೆಯಲ್ಲಿ ಹಮ್ಮಿಕೊಂಡಿದ್ದ ಗಣಪನ ಮಹಾಪೂಜೆಯಲ್ಲಿ ಗುಮ್ಮಟೆ ವಾದ್ಯ ಬಾರಿಸಿ ಭಜನೆ ಮೂಲಕ ಗಮನ ಸೆಳೆದಿದ್ದಾರೆ. ಐದು ದಿನದ ಗಣೇಶ ಪ್ರತಿಷ್ಟಾಪನೆ ಮಾಡಿದ್ದು, ನಾಲ್ಕನೆ ದಿನದಂದು ಗಣಪನಿಗೆ ವಿಶೇಷ ಪೂಜೆ ಮಾಡಿ ಅನ್ನ ಪ್ರಸಾದ, ಅರಿಶಿಣ ಕುಂಕುಮ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಪೂಜೆಗೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಬಿಜೆಪಿ ಕಾರವಾರ ಗ್ರಾಮೀಣ ಮತ್ತು ನಗರ ಮಂಡಲ, ಅಂಕೋಲಾ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಕಷ್ಟವೆಂದು ಹೇಳಿಕೊಂಡು ಬರುವ ಯಾರನ್ನೂ ಕೂಡ ಬರಿಗೈಲಿ ಕಳುಹಿಸಿಲ್ಲ, ಸದಾ ಸಮಾಜ ಸೇವೆಯಿಂದಲೇ ಎಲ್ಲರ ಮನೆ ಮನದಲ್ಲೂ ರೂಪಾಲಿ ನಾಯ್ಕ ಗುರುತಿಸಿಕೊಂಡಿದ್ದಾರೆ. ಪಕ್ಷ ಸಂಘಟನೆಯಲ್ಲೂ ಕೂಡ ಮುಂಚೂಣಿಯಲ್ಲಿದ್ದಾರೆ.
ಅಪಾರ ದೈವಿಭಕ್ತರಾಗಿರುವ ರೂಪಾಲಿ ನಾಯ್ಕ, ರಾಜಕೀಯ, ಸಮಾಜ ಸೇವೆಯ ಜತೆ ಜೊತೆಗೆ ದೇವರ ಪೂಜಾ ಕಾರ್ಯಕ್ರಮಗಳನ್ನು ಮಾಡುತ್ತ ಗಮನ ಸೆಳೆಯುತ್ತಿರುತ್ತಾರೆ. ಈ ಹಿಂದೆ ಕಾರ್ಯಕ್ರಮಗಳಲ್ಲಿ ಅವರೇ ಹೇಳಿ ಕೊಂಡಂತೆ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದುಕೊಂಡಿರುವುದಾಗಿ ಹೇಳಿದ್ದರು. ದಾಂಡಿಯಾ, ನೃತ್ಯ ಮಾಡಿದ ವೀಡಿಯೋಗಳು ವೈರಲ್ ಆಗಿದ್ದವು. ಪ್ರಸ್ತುತ ಗಣಪನ ಭಜನೆ ಗುಮ್ಮಟೆ ವಾದ್ಯ ಬಾರಿಸುವ ವೀಡಿಯೋ ವೈರಲ್ ಆಗಿದ್ದು, ಎಲ್ಲ ಕ್ಷೇತ್ರದಲ್ಲೂ ಕೂಡ ಸೈ ಎನ್ನಿಸಿಕೊಂಡಿರುವುದು ಸಾಬೀತಾಗಿದೆ.