ಅಂಕೋಲಾ: ಸ್ವಾತಂತ್ರ್ಯ ಹೋರಾಟದ ಕೊನೆಯ ಕೊಂಡಿಯಾಗಿದ್ದ ಶತಾಯಿಷಿ ವೆಂಕಣ್ಣ ಬೊಮ್ಮಯ್ಯ ನಾಯಕ ಭಾನುವಾರ ಅಸ್ತಂಗತರಾಗಿದ್ದಾರೆ. ಮೃತರು ಪತ್ನಿ ಪಾರ್ವತಿ, ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವೆಂಕಣ್ಣ ಬೊಮ್ಮಯ್ಯ ನಾಯಕರವರ ಅಂತ್ಯಕ್ರಿಯೆ ಸೋಮವಾರ ಮುಂಜಾನೆ 8.30 ಕ್ಕೆ ಸೂರ್ವೆಯಲ್ಲಿ ನಡೆಯಲಿದ್ದು, ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ವೆಂಕಣ್ಣ ನಾಯಕ ಅವರು ಬ್ರಿಟಿಷ ಸರಕಾರದ ವಿರುದ್ಧ ಅಸಹಕಾರ ಚಳುವಳಿ, ಜಂಗಲ್ ಸತ್ಯಾಗ್ರಹ, ಹುಲ್ಲುಬನ್ನಿ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಉಳುವರೆ ಜಂಗಲ್ ಸುಡುವ ಕಾರ್ಯದಲ್ಲಿ ಭಾಗವಹಿಸಿದ್ದರು. ಇನ್ನು ಭಾರತ ಮಾತೆಯ ಬಂಧನ ಕಳಚಲು ಹಲವು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. 05-12-1942 ರಿಂದ 07-06-1943 ವರೆಗೆ ನಾಸಿಕ್ ಸೆಂಟ್ರಲ್ ಜೈಲ್‌ನಲ್ಲಿ ಕೈದಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದರು.
ಸ್ವಾತಂತ್ರ್ಯ ನಂತರದಲ್ಲಿ ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸೇವಾ ಸಹಕಾರಿ ಸಂಘ ತಳಗದ್ದೆಯ ಸಂಸ್ಥಾಪನಾ ಅಧ್ಯಕ್ಷರಾಗಿ ಸೇವಾ ಸಹಕಾರಿ ಸಂಘ ಸೂರ್ವೆಯ ಅಧ್ಯಕ್ಷರಾಗಿ, ತಾಲೂಕಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನಿರ್ದೇಶಕರಾಗಿ ಹೀಗೆ ಹಲವು ಕಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.