ದಾಂಡೇಲಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಗಳ ಮಾಡಿಕೊಂಡು ಕೊಲೆಗೆ ಯತ್ನಿಸಿದ ಮೂವರನ್ನು ನಗರ ಪೊಲೀಸ್ ಠಾಣೆ ಪೋಲೀಸರು ಶುಕ್ರವಾರ ಬಂಧಿಸಿದ್ದಾರೆ. ದಾಂಡೇಲಿ ನಿವಾಸಿಗಳಾದ ಮಾರುತಿ ದೇಮಣ್ಣ ಗುರವ, ಅಶೋಕ ದೇಮಣ್ಣ ಗುರವ ಇನ್ನೋರ್ವ ಆರೋಪಿ ಮೈಕೆಲ್ ಅಪ್ಪು ಕಕ್ಕೇರಿ ಬಂಧಿತ ಆರೋಪಿಗಳು.
ಘಟನೆಯ ವಿವರ
ಶುಕ್ರವಾರ ಮಧ್ಯಾಹ್ನ ಗಾಂಧಿನಗರದ ಗಣಪತಿ ದೇವಸ್ಥಾನದ ಹತ್ತಿರ ಸುನೀಲ ಅರ್ಜುನ ಮಂದೇವಾಲೆ, ಮಾರುತಿ ದೇಮಣ್ಣ ಗುರವ ಮಧ್ಯೆ ಜಗಳ ನಡೆದಿದೆ. ಸಂಜೆ ಗಣಪತಿ ನೋಡಿಕೊಂಡು ಬರುವ ಸಮಯದಲ್ಲಿ ಮಾರುತಿ ದೇಮಣ್ಣ ಗುರವ ತನ್ನ ಸಹಚಹರಗಳೊಂದಿಗೆ ಕೈಯಲ್ಲಿ ಮಾರಕಾಸ್ತ್ರ ಹಾಗೂ ದೊಣ್ಣೆ ಬಡಿಗೆಗಳನ್ನು ಹಿಡಿದುಕೊಂಡು ಬೈಕ್ ಮೇಲೆ ಬಂದು ಸುನೀಲ ಅರ್ಜುನ ಮಂದೇವಾಲೆಯನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲದೇ ಕೊಲೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರದಿಂದ ಸುನೀಲ್ ಗೆ ಹೊಡೆದಿದ್ದು ಕೈಗೆ ಮತ್ತು ಎಡ ಭುಜಕ್ಕೆ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ ನಡೆದ ನಂತರ ಜೀವ ರಕ್ಷಣೆ ಉದ್ದೇಶದಿಂದ ಸುನೀಲ್ ಓಡಿ ಹೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡು ರಾತ್ರಿ ವೇಳೆಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.