ದಾಂಡೇಲಿ: ನಮ್ಮದು 40% ಆಡಳಿತ ಎಂದು ಹೇಳುವವರು ತಮ್ಮ ಕ್ಷೇತ್ರದಲ್ಲಿ ನಡೆದ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲವೆಂದು ಕಾಂಗ್ರೆಸ್ ನವರು ಪ್ರಮಾಣ ಮಾಡಲಿ ಎಂದು ಬಿಜೆಪಿ ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು. ಭಾನುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರವಾಸೋದ್ಯಮದ ಹೆಸರಿನಲ್ಲಿ ಕಾಳಿ ನದಿಯಲ್ಲಿ ಮೊಸಳೆ ಪಾರ್ಕ್ ನಿರ್ಮಾಣ ಮಾಡಿ ಜನರ ಸಾವಿಗೆ ನೇರ ಕಾರಣವಾಗಿ, ಅಪರಾಧಿ ಸ್ಥಾನದಲ್ಲಿ ಇದ್ದಾರೆ. ಅನುಭವಿ, ಹಿರಿಯ ಶಾಸಕರು ಎಂದು ಕರೆಯಿಸಿಕೊಳ್ಳುವ ಇವರು ಕನಿಷ್ಠ ಮೊಸಳೆ ಜೀವನ ಕ್ರಮವನ್ನು ಅಧ್ಯಯನ ಮಾಡಿ ಯೋಜನೆ ಕೈಗೊಂಡಿಲ್ಲ. ಆದರೆ ಪ್ರಚಾರಕ್ಕಾಗಿ, ತಮ್ಮ ಹಿಂಬಾಲಕರಿಗೆ ಟೆಂಡರ್ ಕೊಡಿಸುವ ಸಲುವಾಗಿ ಯೋಜನೆ ಜಾರಿ ಮಾಡಿದ್ದಾರೆ.
ಮೊಸಳೆ ದಾಳಿ ನಿಯಂತ್ರಣಕ್ಕೆ ಗೋಡೆ ನಿರ್ಮಾಣ ಮಾಡಬೇಕು ಎನ್ನುವುದು ಹಾಸ್ಯಾಸ್ಪದ. ಇದೇ ರೀತಿಯಾದರೆ ನದಿ ತೀರದ ಜನರನ್ನು ಖಾಲಿ ಮಾಡಿಸಬೇಕಾಗುತ್ತದೆ. ಆಹಾರ ಕೊರತೆಯಿಂದ ಮೊಸಳೆ ದಾಳಿ ಮಾಡುವುದು ಸಹಜ ಹೀಗೆ ದಾಳಿಗೆ ಒಳಗಾದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸಿ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಶ್ರೀನಿಧಿ-ಶ್ರೇಯಸ್ ಕಾಗದ ಕಾರ್ಖಾನೆಯ ಕಾರ್ಮಿಕನ ಸಾವು ಸಂಭವಿಸಿದಾಗ ಸ್ಥಳಕ್ಕೆ ಬಾರದೇ ಇದ್ದದ್ದು ಕ್ಷೇತ್ರದ ಕಾರ್ಖಾನೆ ಮುಚ್ಚಿಸುವ ಹುನ್ನಾರ ಎಂದು ಕಾಣುತ್ತದೆ. ತಮ್ಮ ಹಾಗೂ ವಿಧಾನ ಪರಿಷತ್ ಸದಸ್ಯರ ನಡುವಿನ ವೈಷಮ್ಯ ತಂದು ರಾಜಕೀಯ ಮಾಡಿ ಕಾರ್ಖಾನೆ ಸಮಸ್ಯೆಯನ್ನು ಜಟಿಲವಾಗುವಂತೆ ಮಾಡಿದ್ದಾರೆ. ಕಾರ್ಖಾನೆ ಆಸ್ತಿ ಮೌಲ್ಯಕ್ಕಿಂತ ಸಾಲದ ಹೊರೆ ಹೆಚ್ಚಾಗಿದೆ. ಕಾರ್ಮಿಕರ ಇಎಫ್, ಪಿಎಫ್ ಕಟ್ಟದೇ ಕಾರ್ಮಿಕರು ಬೀದಿಗೆ ಬಿಳುವಂತೆ ಮಾಡಿದ್ದಾರೆ. ಹೀಗಾಗಿ ಶಾಸಕರು ಕಾರ್ಖಾನೆಗಳನ್ನು ಮುಚ್ಚುವಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಖಾನೆ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ದೀಪಾವಳಿ ಒಳಗಾಗಿ ಮಾಲೀಕರು ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು ಇಲ್ಲದೇ ಹೋದರೆ ಶಾಸಕರು, ಮಾಲೀಕರು ಕಾನೂನು ಹೋರಾಟಕ್ಕೆ ಸಿದ್ದರಾಗಬೇಕು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ರವಿ ಗಾಂವ್ಕರ್, ಕಾರ್ಯದರ್ಶಿ ಗುರು ಮಠಪತಿ, ಗಿರೀಶ್ ತೋಸುರು, ಸಂಜಯ ಜಾದವ್, ಶಾರದಾ ಪರಶುರಾಮ ಮುಂತಾದವರು ಇದ್ದರು.