ಗುಮ್ಮಟೆ ಪಾಂಗ್ ಭಜನೆಯೊಂದಿಗೆ ಗಣಪನ ಮೂರ್ತಿಗಳ ವಿಸರ್ಜನೆ.!

ಕುಮಟಾ : ಪಟ್ಟಣದ ಹೆರವಟ್ಟಾದ ಹೊಸಹಿತ್ತಲಿನ ವಿವಿಧೆಡೆ ಪೂಜಿಸಲಾದ ಗಣಪನ ಮೂರ್ತಿಗಳನ್ನು ದೈವಜ್ಞ ಬ್ರಾಹ್ಮಣ ಸಮಾಜದವರು ಗುಮ್ಮಟೆ ಪಾಂಗ್ ಭಜನೆಯೊಂದಿಗೆ ಮೆರವಣಿಗೆ ಮೂಲಕ ತಾರಿಬಾಗಿಲಿನ ಹಳ್ಳಕ್ಕೆ ಕೊಂಡೊಯ್ದು ವಿಸರ್ಜಿಸಿದರು.

ಗಣೇಶ ಚತುರ್ಥಿ ದಿನದಂದು ಕುಮಟಾ ಪಟ್ಟಣದ ಹೊಸಹಿತ್ತಲಿನಲ್ಲಿ ವಿವಿಧೆಡೆ ಪೂಜಿಸಲಾದ ಗಣಪನನ್ನು ಐದನೇ ದಿನವಾದ ಭಾನುವಾರ ಒಂದೆಡೆ ಸೇರಿಸಿ ಅದ್ಧೂರಿ ಮೆರವಣಿಗೆಯ ಮೂಲಕ ಮೀನು ಮಾರುಕಟ್ಟೆ ಬಳಿಯ ತಾರಿಬಾಗಿಲಿನ ಹಳ್ಳಕ್ಕೆ ಕೊಂಡೊಯ್ಯಲಾಯಿತು. ಈ ವಿಸರ್ಜನಾ ಮೆರವಣಿಗೆ ಉದ್ದಕ್ಕೂ ದೈವಜ್ಞ ಬ್ರಾಹ್ಮಣ ಸಮಾಜದವರು ಹೆರವಟ್ಟಾದ ಮುಖ್ಯ ರಸ್ತೆ, ಗಿಬ್ ಸರ್ಕಲ್, ಸುಭಾಷ್ ರಸ್ತೆ, ಪಿಕ್‌ಅಪ್ ಬಸ್ ಸ್ಟ್ಯಾಂಡ್ ಮೂಲಕ ಹೆಡ್ ಬಂದರ್ ಕ್ರಾಸ್‌ನಲ್ಲಿ ಗಣೇಶನನ್ನು ಕೂರಿಸಿ, ಗುಮ್ಮಟೆ ಪಾಂಗ್ ಭಜನೆಯ ಜೊತೆಗೆ ಗಣೇಶನನ್ನು ಭಜಿಸುತ್ತ ಮೆರವಣಿಗೆ ಮೂಲಕ ಗಣೇಶನನ್ನು ಕೊಂಡೊಯ್ದು ವಿಸರ್ಜಿಸಲಾಯಿತು. ಮೆರವಣಿಗೆ ಉದ್ದಕ್ಕೂ ಹಾಲಕ್ಕಿ ಸಮಾಜ ಸೇರಿದಂತೆ ಇತರೆ ಸಮಾಜದ ಜನರು ಕೂಡ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಹೊಸಹಿತ್ತಲಿನ ದೈವಜ್ಞ ಬ್ರಾಹ್ಮಣ ಸಮಾಜದವರು ಈ ಗುಮಟೆಪಾಂಗ್ ಭಜನೆ ಸಂಪ್ರದಾಯವನ್ನು ಬ್ರಿಟಿಷ್ ಕಾಲದಿಂದಲೂ ನಡೆಸಿಕೊಂಡು ಬಂದಿದ್ದು, ಈ ಸಂಪ್ರದಾಯ ಕುಮಟಾದಲ್ಲಿ ಹೊರತುಪಡಿಸಿ ಜಿಲ್ಲೆಯ ಬೇರೆಲ್ಲೂ ಕಾಣಸಿಗದು. ಈ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ವೀಕ್ಷಿಸಲು ನೂರಾರು ಜನರು ಸೇರಿದ್ದರು.