ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಕಡ್ಡಾಯವಾಗಿ ಪಡೆಯಲು ಡಿಸಿ ಸೂಚನೆ

ಕಾರವಾರ: ಕೋವಿಡ್ ಗೆ 2ನೇ ಡೋಸ್ ಲಸಿಕೆ ಪಡೆದು 6 ತಿಂಗಳ ನಂತರ ಲಸಿಕೆಯಿಂದ ಸಿಗುವ ರಕ್ಷಣೆ ಕಡಿಮೆಯಾಗುವ ಸಾದ್ಯತೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾರ್ಗಸೂಚಿಯಂತೆ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಭಾನುವಾರ ಹೇಳಿಕೆ ನೀಡಿರುವ ಅವರು ಕೋವಿಡ್ ಸಾಂಕ್ರಾಮಿಕದಿಂದ ರಕ್ಷಣೆ ಪಡೆಯಲು ಈಗಾಗಲೇ ದೇಶಾದ್ಯಂತ 12 ವರ್ಷ ಮೇಲ್ಪಟ್ಟ ಎಲ್ಲಾ ಫಲಾನುಭವಿಗಳಿಗೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದ್ದು ನಮ್ಮ ಜಿಲ್ಲೆಯಲ್ಲೂ ಹೆಚ್ಚಿನ ಫಲಾನುಭವಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಕೋವಿಡ್ ಲಸಿಕೆಯನ್ನು ಪಡೆದವರಲ್ಲಿ ಕೋವಿಡ್ ಖಾಯಿಲೆಯ ತೀವ್ರತೆ ಅತೀ ಕಡಿಮೆ ಪ್ರಮಾಣದಲ್ಲಿ ಇರುವುದು ಈಗಾಗಲೇ ಸಾಬೀತಾಗಿದೆ.

ಕೋವಿಡ್ ಪ್ರಕರಣಗಳು ಈಗಲೂ ವರದಿಯಾಗುತ್ತಿದ್ದು 2 ನೇ ಡೋಸ್ ಲಸಿಕೆ ಪಡೆದು 6 ತಿಂಗಳ ನಂತರ ಲಸಿಕೆಯಿಂದ ಸಿಗುವ ರಕ್ಷಣೆ ಕಡಿಮೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾರ್ಗಸೂಚಿಯಂತೆ ಬೂಸ್ಟರ್ ಡೋಸ್ ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ನೀಡಲು ಪ್ರಾರಂಭ ಮಾಡಿ ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಒಟ್ಟು 2,00,369 ಅರ್ಹ ಫಲಾನುಭವಿಗಳ ಪೈಕಿ 88,799 (44%) ಫಲಾನುಭವಿಗಳು ಮಾತ್ರ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದು ಇನ್ನೂ 1,11,570 ಫಲಾನುಭವಿಗಳು ಲಸಿಕೆ ಪಡೆಯಲು ಬಾಕಿ ಇದ್ದಾರೆ.

ಆಜಾದಿ ಕಿ ಅಮೃತ ಮಹೋತ್ಸವದ ಅಂಗವಾಗಿ 18 ವರ್ಷದಿಂದ 59 ವರ್ಷದವರೆಗಿನ ಎಲ್ಲಾ ನಾಗರಿಕರಿಗೆ ಜುಲೈ 15 ರಿಂದ ಸಪ್ಟೆಂಬರ್ 30ರ ವರೆಗೆ ಉಚಿತವಾಗಿ ನೀಡುವ ಅಭಿಯಾನವನ್ನು ಹಮ್ಮಿಕೊಂಡಿದ್ದು ಇದುವರೆಗೆ ಸದ್ರಿ ವಯೋಮಾನದ 7,74,330 ಅರ್ಹಫಲಾನುಭವಿಗಳ ಪೈಕಿ 72,181 ಫಲಾನುಭವಿಗಳು (9%) ಮಾತ್ರ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆದಿರುತ್ತಾರೆ. ಅಭಿಯಾನದಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಕೂಡಾ ಲಸಿಕಾಕರಣ ನಡೆಸುತ್ತಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಕಾಯಿಲೆಯು ಇನ್ನೂ ಮುಗಿದಿಲ್ಲವಾದ್ದರಿಂದ, ಮುಂದಿನ ದಿನಗಳಲ್ಲಿ ಕೋವಿಡ್ ಖಾಯಿಲೆಯಿಂದ ಆಗಬಹುದಾದ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಲಸಿಕೆ ಪಡೆಯಲು ನಿರಾಸಕ್ತಿ ತೋರದೇ 2ನೇ ಡೋಸ್ ಕೋವಿಡ್ ಲಸಿಕೆ ಪಡೆದು 6 ತಿಂಗಳ ಅವಧಿ ಪೂರೈಸಿರುವ ಎಲ್ಲಾ 18 ವರ್ಷ ಮೇಲ್ಪಟ್ಟ ನಾಗರಿಕರು ಬೂಸ್ಟರ್ ಡೋಸ್ ಲಸಿಕೆ ಕಡ್ಡಾಯವಾಗಿ ಕೂಡಲೇ ಪಡೆದು ಕೊಳ್ಳುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.