ಸೆ. 5 ರಿಂದ ಸುಪ್ರೀಂಕೋರ್ಟ್ ನಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿದ ಅಂತಿಮ ವಿಚಾರಣೆ

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ದೆಹಲಿಯ ಸುಪ್ರೀಂಕೋರ್ಟ್ ಅಂತಿಮ ವಿಚಾರಣೆ ಸಪ್ಟೆಂಬರ್ 5 ರಿಂದ ಪ್ರಾರಂಭವಾಗಲಿದೆ ಎಂದು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾಗಿರುವ ಅರ್ಜಿದಾರರನ್ನು ಒಕ್ಕಲೆಬ್ಬಿಸಿ, ಅತಿಕ್ರಮಣ ಪ್ರದೇಶವನ್ನು ಅರಣ್ಯೀಕರಣ ಮಾಡಬೇಕೆಂದು ಏಂಟು ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ಮಹತ್ವದ ವಿಚಾರಣೆ ಇದಾಗಿದೆ ಎಂದು ಹೇಳಿದ್ದಾರೆ.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಈ ಪ್ರಕರಣದಲ್ಲಿ ಅತಿಕ್ರಮಣದಾರರ ಪರವಾಗಿ ವಾದ ಮಂಡಿಸಲು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಸ್ವೀಕರಿಸಿದ್ದು, ಅಂತಿಮ ವಿಚಾರಣೆಯಲ್ಲಿ ಅತಿಕ್ರಮಣದಾರರ ಪರವಾಗಿ ಹೋರಾಟಗಾರರ ವೇದಿಕೆಯ ಹಿರಿಯ ನ್ಯಾಯವಾದಿಗಳು ವಾದ ಮಂಡಿಸಲಿದ್ದಾರೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.