ಗಾಳಿ ಮಳೆಯಿಂದ ಅಡಿಕೆ ತೋಟಗಳಿಗೆ ಹಾನಿ.! ಬೆಳೆ ಹಾನಿ ಸರ್ವೆ ಮಾಡಿದ ಗ್ರಾಮ ಲೆಕ್ಕಾಧಿಕಾರಿ.!

ಯಲ್ಲಾಪುರ: ತಾಲೂಕಿನಲ್ಲಿ ವಾರಗಳಿಂದ ಭಾರಿ ಮಳೆಯಾಗುತ್ತಿದ್ದು, ಗಾಳಿ ಮಳೆಗೆ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ತೋಟಗಳಿಗೆ ವ್ಯಾಪಕ ಹಾನಿ ಉಂಟಾಗಿದೆ.

ಗೇರಾಳ ಮಜರೆಯ ರೈತರಾದ ಜಗದೀಶ ಶಂಕರ್ ಭಟ್, ಸುಬ್ರಾಯ ತಿಮ್ಮಯ ಭಟ್ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಒಂದು ಎಕರೆಗೂ ಮೇಲ್ಪಟ್ಟು ಭಾಗಕ್ಕೆ ಹಾನಿಯಾಗಿದ್ದು, ಸುಮಾರು ಮುನ್ನೂಕ್ಕೂ ಅಧಿಕ ಅಡಿಕೆ ಮರಗಳು ನೆಲಕ್ಕುರುಳಿವೆ. ಅಲ್ಲದೇ ಹತ್ತಕ್ಕೂ ಹೆಚ್ಚು ಫಲಭರಿತ ತೆಂಗಿನ ಮರಗಳು ಮುರಿದು ಬಿದ್ದಿವೆ.

ರೈತರಾದ ತಿಮ್ಮಣ್ಣ ಗೋಪಾಲ ಭಟ್ ಅವರ ತೋಟದಲ್ಲಿ ಸಹಿತ ಸುಮಾರು ಒಂದು ಎಕರೆಯಷ್ಟು ಪ್ರದೇಶದಲ್ಲಿ ಅಡಿಕೆಮರಗಳು ಮುರಿದುಬಿದ್ದು ಹಾನಿಯಾಗಿದೆ. ವ್ಯಾಪಕವಾಗಿ ಬೀಸಿದ ಬಿರುಗಾಳಿಗೆ ರೈತರಾದ ಗಣಪತಿ ತಿಮ್ಮಯ್ಯ ಭಟ್ ಅವರ ಮನೆಯ ಮೇಲ್ಚಾವಣಿಗೆ ಹೊದಿಸಿದ ನೂರಾರು ಹಂಚುಗಳು, ಸಿಮೆಂಟ್ ಸೀಟುಗಳು ಹಾರಿ ಹೋಗಿದೆ. ಅಡಿಕೆ ತೋಟವೂ ಭಾಗಶಃ ಹಾಳಾಗಿದೆ.

ಗ್ರಾಮ ಲೆಕ್ಕಾಧಿಕಾರಿ ಈಶ್ವರ ಪಟಗಾರ ಸ್ಥಳಕ್ಕೆ ಆಗಮಿಸಿ ಪಂಚನಾಮೆ ಮಾಡಿ ಸದರಿ ರೈತರ ಹಾನಿಯ ವಿವರವನ್ನು ದಾಖಲಿಸಿಕೊಂಡಿದ್ದಾರೆ. ಗ್ರಾ.ಪಂ ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಕಳಿ ಹಾನಿಗೀಡಾದ ತೋಟಗಳಿಗೆ ಬೇಟಿ ನೀಡಿದ್ದು, ಹಾನಿಯ ವಿವರ ಸಚಿವರಿಗೆ ತಿಳಿಸಿ ಹೆಚ್ಚಿನ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.