ಧಾರವಾಡ: ಶುಕ್ರವಾರ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ತಡಹಾಳ ಗ್ರಾಮದ ಬಳಿ ಹಾದು ಹೋಗುವ ಬೆಣ್ಣೆ ಹಳ್ಳದಲ್ಲಿ ವ್ಯಕ್ತಿಯೋರ್ವ ಕೊಚ್ಚಿ ಹೋಗಿ ಸಾವನ್ನಪ್ಪಿದ್ದ. ಈಗ ಆತನ ಶವ ಪತ್ತೆಯಾಗಿದೆ. ತಡಹಾಳ ಗ್ರಾಮದ 32 ವಯಸ್ಸಿನ ಸದಾನಂದ ಶಿವಣಪ್ಪ ಮಾದರ ಎಂಬುವವರು ಬೆಣ್ಣೆ ಹಳ್ಳದ ಸೇತುವೆ ದಾಟುವ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್ ಸಮೇತ ಹಳ್ಳದಲಿ ಬಿದ್ದು ಸಾವನ್ನಪ್ಪಿದ್ದ.
ಕಳೆದ ಸುಮಾರು 40 ಗಂಟೆಗಳಿಂದ ಎನ್ ಡಿ ಆರ್ ಎಫ್ ಹಾಗೂ ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆ ಆಗಿರಲಿಲ್ಲ. ಆದರೆ ಭಾನುವಾರ ಬೆಳಿಗ್ಗೆ ಶವ ತಾನಾಗಿಯೇ ನೀರಿನ ಮೇಲೆ ತೆಲಿ ಬಂದಿದೆ.
ನೀರಿನ ಹರಿವು ಹೆಚ್ಚಿದ್ದರೂ ಸಹ ಆಕಸ್ಮಿಕ ನೀರಿಗೆ ಬಿದ್ದ ಯುವಕನ ದೇಹ ಕೊಚ್ಚಿ ಹೋಗಿಲ್ಲ. ಮುಳುಗಿದ ಸ್ಥಳದಲ್ಲೇ ದೇಹ ಪತ್ತೆಯಾಗಿದೆ.
ಬೆಳಗಿನ ಜಾವ ಹಳ್ಳದ ನೀರಿನ ಮೇಲೆ ತೇಲುತ್ತಿದ್ದ ದೇಹವನ್ನು ಕಂಡ ಗ್ರಾಮ ಪಂಚಾಯತ್ ಸಿಬ್ಬಂದಿ ಕೂಡಲೇ ತಹಶೀಲ್ದಾರ್ ಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಬಂದಿದ್ದು, ಶವ ಹೊರ ತೆಗೆಯುವ ಕೆಲಸ ಮಾಡುತಿದ್ದಾರೆ. ಸದ್ಯ ನವಲಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.