ಭತ್ತದ ಬೆಳೆಗೆ ಬೆಂಕಿರೋಗ.! ಸಂಕಷ್ಟದಲ್ಲಿ ರೈತಾಪಿ ಸಮುದಾಯ.!

ಸಿದ್ದಾಪುರ: ಅಬ್ಬರದ ಮಳೆಯಿಂದ ನಾಟಿ ಮಾಡಲು ಪರದಾಡಿದ್ದ ಭತ್ತದ ಬೆಳೆಗಾರರಿಗೆ ಈಗ ಬೆಂಕಿ ರೋಗ ಗಾಯದ ಮೇಲೆ ಬರೆ ಎಳೆಯುತ್ತಿದೆ.

ಜಿಲ್ಲೆಯ ಸಿದ್ದಾಪುರ, ಶಿರಸಿ ಹಾಗೂ ಬನವಾಸಿ ಭಾಗದ ಬಹುತೇಕ ಕಡೆ ಭತ್ತದ ಬೆಳೆ ಬೆಂಕಿ ರೋಗ ಕಾಣಿಸಿಕೊಂಡಿದೆ. ನಾಟಿ ಮಾಡಿ ತಿಂಗಳು ಕಳೆಯುವುದರೊಳಗೆ ಭತ್ತದ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನ ಅನೇಕ ಕಡೆಗಳಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದ್ದು, ರೈತಾಪಿ ಸಮುದಾಯವನ್ನು ಸಂಕಷ್ಟಕ್ಕೆ ನೂಕಿದೆ. ಈಗಾಗಲೇ ಗದ್ದೆಗಳ ಕಳೆ ತೆಗೆದು ಯೂರಿಯಾ ಗೊಬ್ಬರವನ್ನು ನೀಡಿದ್ದಾರೆ. ಅಲ್ಲದೇ ಬೆಂಕಿ ರೋಗ ಹೆಚ್ಚು ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಯೂರಿಯಾ, ಪೊಟ್ಯಾಷ್, ಅಮೋನಿಯಂ ಸಲ್ಫೇಟ್‌ಗಳ ಮಿಶ್ರಣವನ್ನು ಸಿಂಪಡಿಸಿದ್ದಾರೆ.

ಬೆಂಕಿ ರೋಗದಿಂದ ಬೆಳೆಯನ್ನು ರಕ್ಷಿಸಿಕೊಳ್ಳುವ ಕಾರಣಕ್ಕಾಗಿ ರೈತರು ರೋಗ ನಿಯಂತ್ರಕ ಕೀಟ ನಾಶಕಗಳನ್ನು ತಂದು ಸಿಂಪಡಣೆ ಮಾಡುತ್ತಿದ್ದಾರೆ. ಗಣೇಶ ಚತುರ್ಥಿ ಹಬ್ಬ ಆಚರಣೆ ಬಿಟ್ಟು ರೈತರು ಔಷಧಿ ಸಿಂಪಡಣೆಯಲ್ಲಿ ತೊಡಗಿದ್ದಾರೆ. ಕೆಲವೆಡೆ ಭತ್ತಕ್ಕೆ ಬೆಂಕಿ ರೋಗದ ಜೊತೆಗೆ ‘ಬಿಳಿ ಎರಗಲು’ ಎಂಬ ರೋಗವು ವ್ಯಾಪಿಸಿದ್ದು, ಬೆಳೆಗಾರರ ನಿದ್ದೆಗೆಡಿಸಿದೆ.

ಜೂನ್-ಜುಲೈ ವೇಳೆಯಲ್ಲಿ ಅತಿವೃಷ್ಟಿಯಿಂದ ನಾಟಿ ಮಾಡಲು ವಿಳಂಬವಾಗಿತ್ತು. ಇದರ ನಡುವೆ ಕಳೆದ ಕೆಲ ದಿನಗಳಿಂದ ಬೆಂಕಿ ರೋಗ ಕಾಣಿಸಿಕೊಂಡಿದೆ. ರಾಸಾಯನಿಕ ಗೊಬ್ಬರ, ಔಷಧಿ, ಆಳು ಮತ್ತಿತರ ಖರ್ಚು ನೋಡಿದರೆ ಭತ್ತದ ಕೃಷಿಯೇ ಸಾಕಪ್ಪಾ ಎನಿಸುತ್ತಿದೆ. ಸರ್ಕಾರ ರೈತರ ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

– ಮಾರುತಿ ನಾಯ್ಕ, ರೈತ