ರಾಯಚೂರು: ಹಾಡಹಗಲೇ ಯುವಕನ ಮೇಲೆ ಗ್ಯಾಂಗೊಂದು ಅಟ್ಯಾಕ್ ಮಾಡಿದ್ದು ರಾಯಚೂರು ಬೆಚ್ಚಿಬಿದ್ದಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲೇ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡಿದ್ದು ನಿಜಕ್ಕೂ ಭೀತಿ ಹುಟ್ಟುವಂತೆ ಮಾಡಿದೆ. ಹರಿಜನವಾಡದ ನಿವಾಸಿ ಅಭಿಷೇಕ್ ಹಲ್ಲೆಗೊಳಗಾದ ಯುವಕ. ಹಳೇ ವೈಷಮ್ಯ, ಪ್ರೇಮ ಪ್ರಕರಣ ಹಲ್ಲೆಗೆ ಕಾರಣ ಎನ್ನಲಾಗಿದ್ದು ಮುನ್ನೂರುವಾಡಿ ನಿವಾಸಿಗಳಾದ ಪವನ್, ಸಂಕೇತ್ ಸೇರಿ ಇತರರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಆಗಸ್ಟ್ 28 ರಂದು ಮಧ್ಯಾಹ್ನ 2:30 ರ ಸುಮಾರಿಗೆ ನಗರದ ರಿಲಾಯನ್ಸ್ ಮಾರ್ಟ್ ಮುಂದೆ ಯುವಕನ ಮೇಲೆ ಗ್ಯಾಂಗ್ ದಾಳಿ ನಡೆದಿದ್ದು ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಈ ರೀತಿ ರಾಜಾರೋಷವಾಗಿ ಹಲ್ಲೆ ಘಟನೆ ನಡೆದಿದ್ದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಜನರಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ.
ಸೂಪರ್ ಮಾರ್ಕೆಟ್ ನಿಂದ ಬೈಕ್ ನಲ್ಲಿ ಹೊರಬಂದ ಯುವಕನ ಮೇಲೆ ಹಲ್ಲೆ ನಡೆಸಿದ ಗುಂಪು, ಯುವಕ ಬೈಕ್ನಿಂದ ಕೆಳಗೆ ಬಿದ್ದ ಕೂಡಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯುವಕನನ್ನ ಥಳಿಸಿ ಆರೇಳು ಜನರ ಗ್ಯಾಂಗ್ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅಲ್ಲಿಯೂ ಹಲ್ಲೆಮಾಡಿದ್ದಾರೆ. ಇನ್ನು ಆ ಯುವಕನಿಗೆ ಬಲವಂತವಾಗಿ ಬಿಯರ್ ಕುಡಿಸಿ ಕಿರುಕುಳ ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲೇ ಇಂತಹ ಘಟನೆ ನಡೆಯುತ್ತಿದ್ದರೂ ಜನ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಹಲ್ಲೆಯ ದೃಶ್ಯಗಳು ಸೆರೆಯಾಗಿವೆ.
ಈ ಕುರಿತಂತೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ. ಓರ್ವ ಆರೋಪಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.