ದಾಂಡೇಲಿ: 2021-2022 ರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ನಗರದ ಜನತಾ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ಅಬ್ದುಲ್ ರಜಾಕ್. ಎ. ಬಾಗವಾನ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಪ್ರೀತಿಯ ಆರ್ಟ್ಸ್ ಬಾಗವಾನ ಸರ್ ಎಂದು ಚಿರಪರಿಚಿತರಾದ ಇವರು ಚಿತ್ರಕಲೆ ಕಲಿಸುವುದರ ಹೊರತಾಗಿಯೂ ಕಲೆಯನ್ನು ಇಷ್ಟದ ಪ್ರಪಂಚವಾಗಿಸಿಕೊಂಡು ವೃತ್ತಿಯಲ್ಲಿ ಸಾರ್ಥಕತೆ ಕಂಡಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯವರಾದ ಬಾಗವಾನ ತಮ್ಮ ಆರಂಭಿಕ ಶಿಕ್ಷಕ ವೃತ್ತಿಯನ್ನು 1991 ರಲ್ಲಿ ಜಿಲ್ಲೆಯ ನರಸಲಗಿಯ ಸರ್.ಎಂ.ಡಿ.ಎಸ್.ಪಿ ಪ್ರೌಢ ಶಾಲೆಯಲ್ಲಿ ಆರಂಭಿಸಿದರು. ಅನಂತರ ದಾಂಡೇಲಿ ಜನತಾ ವಿದ್ಯಾಲಯ ಪ್ರೌಡ ಶಾಲೆಯಲ್ಲಿ 1999 ರಿಂದ ಕಲಾ ಸೇವೆ ಸಲ್ಲಿಸುತ್ತಿದ್ದಾರೆ.
ಆರ್ಟ್ ಮಾಸ್ಟರ್ ಡಿಪ್ಲೋಮಾ ಪದವಿ ಹಾಗೂ ಡ್ರಾಯಿಂಗ್ ಮಾಸ್ಟರ್ ಪದವಿ ಪಡೆದಿರುವ ಇವರು ಚಿತ್ರಕಲಾ
ಶಿಕ್ಷಕರಾಗಿ ಸಾವಿರಾರು ಮಕ್ಕಳಿಗೆ ಕುಂಚ ಹಿಡಿಸಿ, ಕಲಾವಿದರಾಗಲು ಪ್ರೇರಣೆ ನೀಡಿ ಶಿಕ್ಷಕ ವೃತ್ತಿಯ ಜೊತೆಗೆ
ಕಲಾ ಬದುಕನ್ನು ಕಂಡುಕೊಂಡಿದ್ದಾರೆ.
ಕೋವಿಡ್ ಸಮಯದಲ್ಲಿ ಭಿತ್ತಿ ಚಿತ್ರಗಳು ಮೂಲಕ ಜನಜಾಗೃತಿ, ಮಕ್ಕಳಲ್ಲಿ ಕಲೆ ಕುರಿತು ತಿಳಿವಳಿಕೆ ನೀಡುವ ಕಾರ್ಯಕ್ರಮ, ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಕಲಾ ಶ್ರೀ ಉತ್ತಮ ಶಿಕ್ಷಕ ಸೇರಿದಂತೆ, ಹಲವಾರು ಸಂಘ ಸಂಸ್ಥೆಗಳು ಇವರಿಗೆ ಗೌರವಿಸಿ, ಸನ್ಮಾನಿಸಿವೆ. ಕಲಾ ಶಿಕ್ಷಕನಿಗೆ ಈ ವರ್ಷದ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಯ ಗೌರವ ಬಂದಿರುವುದಕ್ಕೆ ದಾಂಡೇಲಿ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.