ಶ್ರಮದಾನದ ಮೂಲಕ ತಮ್ಮೂರಿನ ರಸ್ತೆಯನ್ನು ಸರಿಪಡಿಸಿಕೊಂಡ ಗ್ರಾಮಸ್ಥರು.!

ಶಿರಸಿ: ಈ ಊರಿನ ಹಾಳಾದ ರಸ್ತೆ ರಿಪೇರಿಗೆ ಇಲಾಖೆಗಳು ಮುಂದಾಗಿಲ್ಲ. ಸರಿಪಡಿಸಿಕೊಡಿ ಎಂದು ಸಲ್ಲಿಸಿದ ಅರ್ಜಿಗಳೆಲ್ಲ ಮೂಲೆ ಗುಂಪಾಗುತ್ತಿರುವುದರಿಂದ ಬೇಸತ್ತ ಗ್ರಾಮಸ್ಥರೇ ಸೊಂಟಕ್ಕೆ ಟವೆಲ್ ಸುತ್ತಿ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದಾರೆ.

ತಾಲೂಕಿನ ಗುಡ್ನಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಗುಡ್ನಾಪುರ ಕ್ರಾಸ್‍ನಿಂದ ಮಧುರವಳ್ಳಿಗೆ ಸಂಪರ್ಕಿಸುವ ರಸ್ತೆಯಲ್ಲಿದ್ದ ಹೊಂಡಗಳನ್ನು ಗ್ರಾಮಸ್ಥರು ಸ್ವತಃ ಶ್ರಮದಾನ ಮಾಡುವ ಮೂಲಕ ಶನಿವಾರ ದುರಸ್ಥಿಪಡಿಸಿಕೊಂಡಿದ್ದಾರೆ.

ಸ್ಥಳೀಯ ಯುವಕರು, ಗುಡ್ನಾಪುರ ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯರು ಸೇರಿದಂತೆ ಹತ್ತಾರು ಜನರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಕೆಲವರು ರಸ್ತೆ ರಿಪೇರಿಗೆ ಚಿರೆ ಕಲ್ಲನ್ನೂ ದಾನವಾಗಿ ನೀಡಿದ್ದಾರೆ. ಸುಮಾರು 2 ಕಿ.ಮೀ. ಉದ್ದದ ರಸ್ತೆಯಲ್ಲಿ ಬಿದ್ದಿರುವ ನೂರಾರು ಹೊಂಡಗಳನ್ನು ಚಿರೇಕಲ್ಲು, ಕಲ್ಲಿನ ಪುಡಿ ಬಳಸಿ ಭರ್ತಿ ಮಾಡಿದ್ದಾರೆ.

ರಸ್ತೆ ರಿಪೇರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರಿಪಡಿಸಲಿಲ್ಲ. ರಸ್ತೆ ಸಂಚಾರಕ್ಕೆ ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆ ನಮಗಿತ್ತು. ಈ ರಸ್ತೆಯನ್ನು ಸರ್ವಋತು ರಸ್ತೆಯಾಗಿಸಬೇಕು.

– ಮಧುಕರ ನಾಯ್ಕ, ಸ್ಥಳೀಯ