ಸೆ.15 ರೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಾಪಂ ಆಡಳಿತಾಧಿಕಾರಿ ಸೂಚನೆ

ಕಾರವಾರ: ತಾಲೂಕಾ ಪಂಚಾಯತ್ 15 ನೇ ಹಣಕಾಸು ಯೋಜನೆಯಡಿ 45 ಕಾಮಗಾರಿಗಳಲ್ಲಿ 38 ಕಾಮಗಾರಿಗಳು ಪ್ರಗತಿಯಲಿದ್ದು ಸೆ.15 ರೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಕಾರವಾರ ತಾಲೂಕಾ ಪಂಚಾಯತ್ ಆಡಳಿತಾಧಿಕಾರಿ ಸೋಮಶೇಖರ ಮೇಸ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಸೋಮವಾರದಂದು ನಡೆದ ಮಾಸಿಕ ಪ್ರಗತಿ ಪರಿಶೀಲನಾ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಲಾ ಶೌಚಾಲಯಗಳ  ಹಾಗೂ ಶಾಲಾ ಕಂಪೌಂಡಗಳ ಕಾಮಗಾರಿಗಳನ್ನು ಪರಿಶೀಲಿಸಿ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಾ ಸಮಾಜ ಕಲ್ಯಾಣ ಇಲಾಖೆಯಡಿ ಪ್ರಸುತ್ತ ಸಾಲಿನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಒಟ್ಟು 415 ಅರ್ಜಿಗಳಲ್ಲಿ 412 ಅರ್ಜಿಗಳು ಅನುಮೋದನೆಗೊಂಡಿದ್ದು, 3 ಅರ್ಜಿಗಳು ಆಧಾರ್ ಫೀಡಿಂಗ್ ಆಗದೆ ಇದ್ದರಿಂದ ಬಾಕಿ ಉಳಿದಿದ್ದು, ಕೂಡಲೇ ಅನುಮೊದನೆ ಮಾಡಲಾಗುವುದು ಎಂದು ತಾಲೂಕಾ ಸಮಾಜಕಲ್ಯಾಣ ಅಧಿಕಾರಿಗಳು ವರದಿ ನೀಡಿದರು. ವಸತಿ ನಿಲಯಗಳಲ್ಲಿ ಸ್ವಚ್ಛತೆ ಕುರಿತು ಕೋವಿಡ್ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಮತ್ತು ವಸತಿ ನಿಲಯಗಳಲ್ಲಿ ವಾಶಿಂಗ್ ಮಷಿನ್‌ಗಳ ಅವಶ್ಯಕತೆ ಇದ್ದಲ್ಲಿ ಅರ್ಜಿ ನೀಡಿ ಎಂದು ಸೂಚನೆ ನೀಡಿದರು.

ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆಯೇ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ನೀಡಬೇಕಾದ ಅಕ್ಕಿಯನ್ನು ಹಣ ತೆಗೆದುಕೊಂಡು ಮಾರಾಟ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ಷರದಾಸೋಹ ಇಲಾಖೆಯವರು ಶಾಲಾ ಮಕ್ಕಳಿಗೆ ಹಾಲು ಮೊಟ್ಟೆ ಸರಿಯಾಗಿ ವಿತರಣೆಯಾಗುತ್ತಿದೆಯೇ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ತಾಲೂಕಿನಲ್ಲಿ ಕಳೆದ ವರ್ಷದಿಂದ ಭತ್ತ ಬೆಳೆಗಾರಿಕೆ  ಕಡಿಮೆಯಾಗಿದ್ದು, ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ಹಾಗೂ ಭತ್ತದ ಬೇಳೆ ಕುರಿತು ಮನವರಿಕೆ ಮಾಡಲು ಇಲಾಖೆ ಅಧಿಕಾರಿಗಳನ್ನು ನೇಮಿಸಿ ರೈತರಿಗೆ ಮಾಹಿತಿ ನೀಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯ ಇಲಾಖೆಯ ಗೋಪಶಿಟ್ಟಾ ವಲಯದ ವತಿಯಿಂದ ರೈತರಿಗೆ ಹಣ್ಣಿನ ಸಸಿಗಳನ್ನು ವಿತರಣೆ ಮಾಡಲಾಗುತ್ತದೆ. ಹಾಗೂ ಇಲಾಖೆಯಡಿ ಎಸ್‌ಸಿಪಿ ಮತ್ತು ಟಿ ಎಸ್‌ಪಿ ಯೋಜನೆಯಡಿ 10 ಫಲಾನುಭವಿಗಳಿಗೆ ಗ್ಯಾಸ್‌ ಒಲೆ ವಿತರಣೆ ಮಾಡಲಾಗಿದೆ. ನಿರ್ಮಿತಿ ಕೇಂದ್ರದಿಂದ ಅಂಗನವಾಡಿ ಕೇಂದ್ರಗಳಿಗೆ ಫ್ಯಾನ್ ಪೂರೈಕೆ, 2 ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇಲಾಖೆಗಳ ಪ್ರಗತಿ ಕುರಿತು ವರದಿ ನೀಡಿದರು.

ಪ್ರಗತಿ ಪರೀಶೀಲನೆ ಸಭೆಗೆ ಹಾಜರಾಗದೆ ಇರುವ ಇತರೆ ಇಲಾಖೆ ಅಧಿಕಾರಿಗಳು ಹಾಜರಾಗದೇ ಇರುವುದಕ್ಕೆ ಸೂಕ್ತ ಕಾರಣ ತಿಳಿಸಬೇಕು ಹಾಗೂ ಮುಂದಿನ ಸಭೆಯಲ್ಲಿ ತಪ್ಪದೇ ಮಾಸಿಕ ಪ್ರಗತಿಗಳ ಕುರಿತು ಸರಿಯಾದ ಮಾಹಿತಿ ಸಮೇತ ಹಾಜರಾಗಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಕಾರವಾರ ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಬಾಲಪ್ಪನವರ ಆನಂದಕುಮಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.