ದಾಂಡೇಲಿ ರೆಸಾರ್ಟ್ ನಲ್ಲಿ ಮಹಿಳೆಯ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ.!

ದಾಂಡೇಲಿ: ತಾಲೂಕಿನ ರೆಸಾರ್ಟ್ ನಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ದಾಂಡೇಲಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ದಾಂಡೇಲಿ ಗಾಂಧಿನಗರ ಆಶ್ರಯ ಕಾಲೋನಿ ನಿವಾಸಿಗಳಾದ ರವಿಚಂದ್ರ ರಾಜು ರೆಡ್ಡಿ (50) ಹಾಗೂ ವಿಜಯ ಮಹಾದೇವ ಮಾಸಾಳ (30) ಬಂಧಿತ ಆರೋಪಿಗಳು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪುತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಇನ್ನು ಆಪಾದಿತ ರವಿಚಂದ್ರ ರೆಡ್ಡಿ ಕೊಲೆಯಾದ ಮಹಿಳೆಯು ತನಗೆ ದೈಹಿಕ ಸಂಪರ್ಕಕ್ಕೆ ಅವಕಾಶ
ನೀಡಲಿಲ್ಲ ಎಂಬ ಕಾರಣಕ್ಕಾಗಿ ಕೊಲೆ ಮಾಡಿರುವುದಾಗಿ ಹಾಗೂ ಆಪಾದಿತ ವಿಜಯ ಮಾಸಾಳ, ಕೊಲೆಯಾಗಿರುವ ಮಹಿಳೆಯ ಮೃತ ದೇಹವನ್ನು ದಾಂಡೇಲಿಗೆ ತೆಗೆದುಕೊಂಡು ಬಂದು ಮಹಿಳೆಯು ಸ್ವಾಭಾವಿಕವಾಗಿ ಮೃತ ಪಟ್ಟಿರುತ್ತಾಳೆಂದು ಬಿಂಬಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ.

ದಾಂಡೇಲಿ ಗಾಂಧಿನಗರ ನಿವಾಸಿ ಸುಶೀಲಾ ದುರ್ಗಪ್ಪ ಬೋವಿವಡ್ಡರ (50) ರೆಸಾರ್ಟ್ ನಲ್ಲಿ
ಅಡುಗೆ ಸಹಾಯಕಿ ಕೆಲಸ ಮಾಡುತ್ತಿದ್ದಳು. ಈಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಗ್ಗೆ ಶಂಕೆ ವ್ಯಕ್ತಪಡಿಸಿ ಮೃತಳ ಮಗಳು ಶೋಭಾ ಭೂವಿವಡ್ಡರ ದೂರು ನೀಡಿದ್ದರು.

ಎಸ್ಪಿ ಡಾ. ಸುಮನ್ ಪೆನ್ನೆಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ ಎಸ್ ಹಾಗೂ ದಾಂಡೇಲಿ ಉಪ-ವಿಭಾಗದ ಡಿವೈಎಸ್‌ಪಿ ಕೆ.ಎಲ್ ಗಣೇಶ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ ಎಲ್ ಗಣೇಶ, ಸಿಪಿಐ ಬಿ.ಎಸ್.ಲೋಕಾಪುರ, ಗ್ರಾಮೀಣ ಠಾಣೆಯ ಪಿಎಸ್ಐ ಕೃಷ್ಣಗೌಡಾ ಎನ್ ಅರಕೇರಿ ತನಿಖಾ ವಿಭಾಗದ ಪಿಎಸ್ಐ ಶಿವಾನಂದ ನಾವದಗಿ, ಎ.ಎಸ್. ಮಹಾವೀರ ಕಾಂಬಳೆ, ವೆಂಕಟೇಶ ತಗ್ಗಿನ, ಪೋಲಿಸ್ ಸಿಬ್ಬಂದಿಗಳಾದ ದಯಾನಂದ ಲೊಂಡಿ, ಮಂಜುನಾಥ .ಹೆಚ್. ಶೆಟ್ಟಿ, ಚಿನ್ಮಯ ಪತ್ತಾರ, ರೇವಪ್ಪ ಬಂಕಾಪುರ, ರವಿ ಚೌಹಾಣ್, ಪ್ರದೀಪ ವರ್ದಿ, ಮಲ್ಲಿಕಾರ್ಜುನ ಕೊಂಡೊಜಿ, ದಶರಥ ಲಕ್ಯಾಮರ ತನಿಖೆಯಲ್ಲಿ ಭಾಗವಹಿಸಿ ಕೊಲೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.