ದುಬೈ: ವಿಶ್ವ ಕ್ರಿಕೆಟ್ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮಧ್ಯೆ ಇಂದು ದುಬೈನಲ್ಲಿ ಹೈ ಓಲ್ಟೇಜ್ ಮ್ಯಾಚ್ ನಡೆಯಲಿದೆ. ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ಥಾನ ಟಿ 20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಏಷ್ಯಾ ಕಪ್ ಟಿ 20 ಯಲ್ಲಿ ರೋಹಿತ್ ಶರ್ಮ ನೇತೃತ್ವದ ಭಾರತ, ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ ಮುಖಾಮುಖಿಯಾಗಲಿವೆ. ಅಂತಹದ್ದೊಂದು ರೋಮಾಂಚಕ ಪಂದ್ಯ ಇಂದು ದುಬೈನಲ್ಲಿ ನಡೆಯಲಿದ್ದು ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ.
ಕಳೆದ ವರ್ಷ ನಡೆದ ಟಿ 20 ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನದೆದುರು ಸೋತಿತ್ತು. ಹಾಗಿದ್ದರೂ ಪ್ರಸ್ತುತ ಪಂದ್ಯದಲ್ಲಿ ಭಾರತವೇ ಮೆಚ್ಚಿನ ತಂಡವೆನಿಸಿಕೊಂಡಿದೆ. ಅದನ್ನು ನಿಜ ಮಾಡುವ ಗುರುತರ ಹೊಣೆ ರೋಹಿತ್, ಕೊಹ್ಲಿ, ರಾಹುಲ್ ಅವರಿರುವ ತಂಡಕ್ಕಿದೆ.
ನಾಯಕ ರೋಹಿತ್ ಶರ್ಮ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ರಿಷಭ್ ಪಂತ್ ಒಳಗೊಂಡ ಬ್ಯಾಟಿಂಗ್ ಪಡೆ ಆತ್ಮವಿಶ್ವಾಸದಲ್ಲಿದೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದಾರೆ.
ಭರ್ಜರಿ ಲಯದಲ್ಲಿರುವ ಬಾಬರ್ ಅಜಮ್ ಪಾಕ್ ತಂಡದ ಪ್ರಮುಖ ಟ್ರಂಪ್ ಕಾರ್ಡ್ ಆಗಿದ್ದಾರೆ. ಪ್ರಮುಖ ವೇಗಿ ಶಾಹಿನ್ ಅಫ್ರಿದಿ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಆರಂಭಿಕ ಮೊಹಮದ್ ರಿಜ್ವಾನ್ ಕೂಡ ಉತ್ತಮ ಲಯದಲ್ಲಿದ್ದು, ಅಜಮ್ ಗೆ ಸಾಥ್ ನೀಡುತ್ತಿದ್ದಾರೆ. ಮೂರನೇ ಕ್ರಮಾಂಕ ಫಖರ್ ಜಮಾನ್, ಅಸಿಫ್ ಅಲಿ ಭಾರತದ ಬೌಲರ್ಗಳಿಗೆ ಸವಾಲಾಗಬಲ್ಲರು.