ಹಾವೇರಿ: ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಹಾನಗಲ್ ತಾಲೂಕಿನ ಶಾಡಗುಪ್ಪಿ ಗ್ರಾಮದಲ್ಲಿ ಎರಡು ಮನೆಗಳು ನೆಲಕ್ಕುರುಳಿದೆ. ವಿರುಪಾಕ್ಷಪ್ಪ ಬೆಣ್ಣಿ ಹಾಗೂ ರುದ್ರಗೌಡ ಚನ್ನಗೌಡ ಎಂಬುವರಿಗೆ ಸೇರಿದ ಮನೆಗಳು ಕುಸಿದು ಬಿದ್ದಿವೆ. ಮನೆಯಲ್ಲಿದ್ದ ಅಡುಗೆ ಸಾಮಗ್ರಿಗಳು, ದವಸ ಧಾನ್ಯಗಳು ಸೇರಿದಂತೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಮಣ್ಣು ಪಾಲಾಗಿವೆ. ಮಳೆಗೆ ಮನೆ ಕುಸಿದು ಬಿದ್ದಿರೋದಕ್ಕೆ ಮನೆಯವರು ಕಂಗಾಲಾಗಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಲ್ಲೆಯಲ್ಲಿ ಇವತ್ತು ಮಳೆರಾಯ ಕೊಂಚ ಬಿಡುವು ನೀಡಿದ್ದಾನೆ. ನಿನ್ನೆ ಸಂಜೆ ಸುರಿದ ಮಳೆಗೆ ಬ್ಯಾಡಗಿ ತರಕಾರಿ ಮಾರುಕಟ್ಟೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ತರಕಾರಿ ಮಾರುಕಟ್ಟೆಗೆ ನೀರು ನುಗ್ಗಿದ್ದರಿಂದ ತರಕಾರಿ ವ್ಯಾಪಾರಸ್ಥರು ಹಾಗೂ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು ಕೆಲಕಾಲ ಪರದಾಟ ಅನುಭವಿಸಿದ್ದರು.