ಮುಂಡಗೋಡದಲ್ಲಿ ಮಳೆ ತಂದ ಅವಾಂತರ.! ಕಿಲ್ಲೆ ಓಣಿಯಲ್ಲಿ ಮನೆ ಕುಸಿತ.! ಬಂಕಾಪೂರ ರಸ್ತೆಯಲ್ಲಿ ನೀರು ನಿಂತು ಸಂಚಾರ ಬಂದ್.!

ಮುಂಡಗೋಡ: ತಾಲೂಕಿನಾದ್ಯಂತ ಶನಿವಾರ ನಿರಂತರವಾಗಿ ಸುರಿದ ಮಳೆಗೆ ಪಟ್ಟಣದ ಕಿಲ್ಲೆ ಓಣಿಯಲ್ಲಿ ಮನೆ ಕುಸಿದು ಹಾನಿಯಾಗಿದೆ. ಅಬ್ದುಲ್ ಗನಿ ಹುಬ್ಬಳ್ಳಿ ಎಂಬುವರ ಮನೆ ಗೋಡೆಗಳು ಕುಸಿದುಬಿದ್ದಿವೆ. ಶನಿವಾರ ಬೆಳಗಿನಿಂದ ಹೊಳವು ನೀಡಿದ ಮಳೆರಾಯ ಮಧ್ಯಾಹ್ನದವಾದಂತೆ ಆರಂಭವಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಸುರಿಯಿತು.

ಇನ್ನು ಮಧ್ಯಾಹ್ನದಿಂದ ಸುರಿದ ಮಳೆಯಿಂದಾಗಿ ಬಂಕಾಪೂರ ರಸ್ತೆಯ ಮೇಲೆ ನೀರು ನಿಂತು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಯಿತು. ಬಂಕಾಪೂರ ರಸ್ತೆಯ ಸಿಂಡಿಕೇಟ್ ಬ್ಯಾಂಕ್ ನಿಂದ ಕಂಬಾರಗಟ್ಟಿ ಪ್ಲಾಟ್ ವರೆಗೂ ಸುಮಾರು ಅರ್ಧ ಕಿಲೋಮೀಟರ್ ವರೆಗೆ ಸುಮಾರು ಮೂರು ಅಡಿಗಳಷ್ಟು ನೀರು ನಿಂತು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.

ಹೊಟೆಲ್, ಮನೆಗಳು ಸೇರಿದಂತೆ ವಿವಿಧ ಅಂಗಡಿಗಳಿಗೆ ನೀರು ನುಗ್ಗಿದೆ. ಹೆಗಡೆ ಆಸ್ಪತ್ರೆಯ ಪಕ್ಕದಲ್ಲಿ ಇರುವ ಅಕ್ಕಿಯವರ ಮನೆಗೆ ನೀರು ನುಗ್ಗಿ ಮನೆಯಲ್ಲಿಯ ದಿನಬಳಕೆ ಸೇರಿದಂತೆ ವಿವಿಧ ಸಾಮಗ್ರಿಗಳು ಹಾನಿಯಾಗಿವೆ. ಕೆಲವು ಮನೆಗಳಲ್ಲಿ ಪಂಪ ಸೆಟ್ ಮೂಲಕ ನೀರನ್ನು ಹೊರಹಾಕಲಾಯಿತು. ಪಟ್ಟಣ ಪಂಚಾಯತನವರು ಅಲ್ಲಲ್ಲಿ ಚರಂಡಿಗಳನ್ನು ಒಡೆದು ಜೆಸಿಬಿಯಿಂದ ನೀರು ಹೊರಹೊಗುವಂತೆ ಮಾಡಿದರು.