ಹೊನ್ನಾವರ: ಹೃದಯಘಾತವಾದ ಸಂದರ್ಭದಲ್ಲಿ ತುರ್ತಾಗಿ ಸಿಪಿಆರ್ ಚಿಕಿತ್ಸೆ ನೀಡಿದರೆ ಪ್ರಾಣಾಪಾಯದಿಂದ ವ್ಯಕ್ತಿಯನ್ನು ಬದುಕಿಸಬಹುದಾಗಿದೆ. ಜನಸಾಮಾನ್ಯರು ಸಿಪಿಆರ್ ಚಿಕಿತ್ಸೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕು ಎಂದು ಹೊನ್ನಾವರ ತಾಲೂಕ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ. ಪ್ರಕಾಶ ನಾಯ್ಕ ಹೇಳಿದರು.
ಅವರು ಆಸ್ಪತ್ರೆಯಲ್ಲಿ ನಡೆದ ‘ಹೃದಯಾಘಾತ ಮತ್ತು ಹೃದಯ ಸ್ತಂಭನ’ ಕುರಿತ ಮಾಹಿತಿ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಿಬ್ಬಂದಿಗಳಿಗೆ ತರಬೇತಿ ನೀಡಿದರು. ವೈದ್ಯಕೀಯ ಚಿಕಿತ್ಸೆ ಸಿಗುವವರೆಗೆ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತುರ್ತಾಗಿ ಸಿಪಿಆರ್ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಮನೆಯಲ್ಲಿ ಅಥವಾ ಆಸ್ಪತ್ರೆ ಹೊರಗೆ ಹೃದಯಘಾತವಾದಾಗ ಕುಟುಂಬಸ್ಥರು ಅಥವಾ ಸಾರ್ವಜನಿಕರು ಅಂಬ್ಯುಲೆನ್ಸ್ ಗೆ ಕಾಯುತ್ತಾರೆ. ಆದರೆ ಸಿಪಿಆರ್ ಚಿಕಿತ್ಸೆ ನೀಡುವ ಬಗ್ಗೆ ಗಮನ ನೀಡುವುದಿಲ್ಲ. ಸಿಪಿಆರ್ ಚಿಕಿತ್ಸೆಗೆ ವಿಶೇಷ ತರಬೇತಿಯಾಗಲಿ ಸರ್ಟಿಪಿಕೆಟ್ ಆಗಲಿ ಬೇಕಿಲ್ಲ. ಅದರ ಬಗ್ಗೆ ತಿಳಿದುಕೊಂಡು ಪಾಲನೆ ಮಾಡಿದರೆ ಬದುಕಿಳಿಯುವ ಸಾದ್ಯತೆ ಹೆಚ್ಚಿರುತ್ತದೆ ಎಂದರು.
ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಮಾತನಾಡಿ, ಇಂತಹ ತರಬೇತಿ ಕಾರ್ಯಗಾರಗಳು ನಮ್ಮ ಕೌಶಲ್ಯಗಳನ್ನು ಮತ್ತು ಜ್ಞಾನಗಳನ್ನು ಹೆಚ್ಚಿಸಿಕೊಳ್ಳಲು ಅನೂಕೂಲವಾಗುತ್ತದೆ. ಡಾ. ಪ್ರಕಾಶ ನಾಯ್ಕರವರು ಉತ್ತಮ ತರಬೇತಿ ಸಿಬ್ಬಂದಿಗಳಿಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ತರಬೇತಿಗಳು ಸಿಬ್ಬಂದಿಗಳಿಗೆ ಸಿಗುವಂತೆ ಮಾಡಲಾಗುವುದು ಎಂದು ಹೇಳಿದರು.
ಏನಿದು ಸಿಪಿಆರ್?
ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯನ್ನು ವ್ಯಕ್ತಿಯು ಮೂರ್ಛೆ ಹೊದರೆ, ಹೃದಯ ಬಡಿತವು ನಿಂತು ಹೋದರೆ ಅಥವಾ ನಾಡಿಮಿಡಿತ ನಿಂತಿದ್ದರೆ ಮಾಡಲಾಗುತ್ತದೆ. ಹೃದಯಘಾತದ ಹತ್ತು ಪ್ರಕರಣಗಳಲ್ಲಿ ಏಳು ಪ್ರಕರಣಗಳು ಮನೆಯಲ್ಲಿ ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಸಿಪಿಆರ್ ಬಗ್ಗೆ ತಿಳಿದುಕೊಂಡಿದ್ದರೆ ವ್ಯಕ್ತಿಯ ಜೀವ ಉಳಿಸುವ ಸಾದ್ಯತೆ ಏರಡರಿಂದ ಮೂರು ಪಟ್ಟು ಜಾಸ್ತಿ ಇರುತ್ತದೆ. ಸಿಪಿಆರ್ ಮಾಡುವದರಿಂದ ಮೆದುಳಿಗೆ, ಹೃದಯಕ್ಕೆ ರಕ್ತ ಸಂಚಾರವಾಗಲು ಸುಗಮವಾಗುತ್ತದೆ. ಸಿಪಿಆರ್ ಬಗ್ಗೆ ಜ್ಞಾನ ಅಗತ್ಯ. ಜನಸಾಮನ್ಯರು ಇದರ ಬಗ್ಗೆ ತಿಳಿದುಕೊಂಡಿದ್ದರೆ ತುರ್ತು ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ.
ತರಬೇತಿಯಲ್ಲಿ ಪರಸ್ಪರ ಚರ್ಚೆ ಮೂಲಕ ಸಂಶಯಗಳಿಗೆ ಪರಿಹಾರ ಕಂಡುಕೊಳ್ಳಲಾಯಿತು. ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗಳು ತರಬೇತಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.