ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಎಂ. ರಾಯ್ಕರ್ ನಿವೃತ್ತಿ: ಸಹೋದ್ಯೋಗಿಗಳಿಂದ ಬೀಳ್ಕೊಡುಗೆ

ಕಾರವಾರ: ಕರ್ನಾಟಕ ಸರಕಾರದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲಾ ಸಾಂಖ್ಯಿಕ ಇಲಾಖೆಯ ಉಪ-ನಿರ್ದೇಶಕರಾದ ಪ್ರಕಾಶ ಎಂ. ರಾಯ್ಕರ ಅವರಿಗೆ ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಗಳಾದ ವಿನೋದ ಅಣ್ವೇಕರ ಮಾತನಾಡಿ, ಸಾಂಖ್ಯಿಕ ಇಲಾಖಾ ಉಪ-ನಿರ್ದೇಶಕರಾದ ಪ್ರಕಾಶ ಎಂ. ರಾಯ್ಕರ್ ಅವರಿಗೆ ಸರ್ವೋತ್ತಮ ಸೇವಾ ಪುರಸ್ಕಾರ ದೊರೆತಿರುವುದು ಅರ್ಹರಿಗೆ ಸಂದ ಗೌರವವಾಗಿದೆ. ಪ್ರಕಾಶ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಎಲ್ಲರಿಗೂ ಮಾದರಿಯಾಗುಂತೆ ಸೇವೆ ಸಲ್ಲಿಸಿದ್ದಾರೆ ಎಂದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಸೋಮಶೇಖರ ಮೇಸ್ತ ಮಾತನಾಡಿ, ಸಾಂಖ್ಯಿಕ ಇಲಾಖೆಯ ಜಿಲ್ಲಾ ಮಟ್ಟದ ವಾರ್ಷಿಕ ಪ್ರಕಟಣೆಯಾದ ಜಿಲ್ಲಾ ಅಂಕಿ ಅಂಶಗಳ ನೋಟ ಪುಸ್ತಕ ಪ್ರಕಟಣೆಗೆ ಪ್ರಕಾಶ್‌ ರಾಯ್ಕರ್ ಸಾಕಷ್ಟು ಸಹಕರಿಸಿದ್ದರು. ಅದಲ್ಲದೇ ತಮ್ಮ ಸೇವಾವಧಿಯ ಬಹು ಪಾಲು ಅವಧಿಯನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ನಿರ್ವಹಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಹುದ್ದೆಯಿಂದ ವಯೋ ನಿವೃತ್ತಿಹೊಂದಿದ್ದಾರೆ. ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಪ್ರಕಾಶ ಎಂ. ರಾಯ್ಕರ ಅವರು ಮಾತನಾಡಿ, ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಪ್ರತಿಯೊಬ್ಬರ ಸಹಕಾರದಿಂದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ಸಾದ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ನ ಯೋಜನಾ, ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿಗಳಾದ ಜೆ. ಆರ್. ಭಟ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯ ಸಹಾಯಕ ನಿರ್ದೇಶಕರಾದ ದತ್ತಾತ್ರಯ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.