ಗುರುವಾಗಬೇಕಾದರೆ ಜ್ಞಾನ, ಕರುಣೆ ಅಗತ್ಯ – ರಾಘವೇಶ್ವರ ಶ್ರೀ

ಗೋಕರ್ಣ: ಗುರು ಎಂಬ ಪಂಚಾಮೃತಕ್ಕೆ ಜ್ಞಾನ ಮತ್ತು ಕರುಣೆ ಅಗತ್ಯ. ಸುಜ್ಞಾನ ಹಾಗೂ ಕಾರುಣ್ಯ ಇಲ್ಲದ ವ್ಯಕ್ತಿ ಗುರುವಾಗಲಾರ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯಕೋಟಿಯಲ್ಲಿ ಗುರುಗಳಿಗೆ ಸರ್ವಶ್ರೇಷ್ಠ ಸ್ಥಾನವಿದೆ. ಜೀವಕೋಟಿಗಳಲ್ಲಿ ಮನುಷ್ಯ ಶ್ರೇಷ್ಠ. ಮನುಷ್ಯರಲ್ಲಿ ಅನೇಕ ಮಹಾತ್ಮರು ಇರುತ್ತಾರೆ. ಆದರೆ ಗುರುಗಳು ಅವರೆಲ್ಲರಿಗಿಂತ ಮೇಲು. ದೇವರಿಗಿಂತಲೂ ಗುರು ಶ್ರೇಷ್ಠ. ಎಲ್ಲ ದೇವರಲ್ಲಿರುವ ಪರಾತ್ಪರ ತತ್ವ ಗುರು ಎಂದು ಪ್ರಾಜ್ಞರು ಹೇಳಿದ್ದಾರೆ. ಗುರು ಎಂಬ ಪಂಚಾಮೃತದಲ್ಲಿ ಪ್ರಮುಖವಾಗಿ ಸುಜ್ಞಾನ ಹಾಗೂ ಕಾರುಣ್ಯ ಇರಬೇಕು. ಇವೆರಡೂ ಇರುವವರು ಗುರು ಎನಿಸಿಕೊಳ್ಳುತ್ತಾರೆ ಎಂದು ವಿಶ್ಲೇಷಿಸಿದರು.

ಎರಡು ಮಹಾಗುಣಗಳು ಇಲ್ಲದಿದ್ದರೆ ಆತ ಗುರುವಾಗಲಾರ. ಇವಿಲ್ಲದೇ ಗುರುತ್ವ ಪೂರ್ಣವಾಗುವುದಿಲ್ಲ. ಹಸುವಿನ ಕೆಚ್ಚಲಲ್ಲಿ ಇರುವ ಹಾಲು ಕರುವಿಗೆ ದೊರಕಬೇಕಾದರೆ, ಗೋವಿಗೆ ವಾತ್ಸಲ್ಯ ಬೇಕು. ಕರುವಿನ ಬಗೆಗಿನ ವಾತ್ಸಲ್ಯದ ಭಾವ ಇದ್ದಾಗ ಮಾತ್ರ ಅದು ಹಾಲು ಸ್ರವಿಸುತ್ತದೆ. ಅಂತೆಯೇ ಗುರುವಿನ ಹೃದಯದಲ್ಲಿರುವ ಜ್ಞಾನ ಗುರುವಿನಿಂದ ಶಿಷ್ಯರೆಡೆಗೆ ಹರಿಯುವುದು ಕಾರುಣ್ಯದ ಪ್ರಭಾವದಿಂದ ಎಂದು ಹೇಳಿದರು.

ಶಂಕರರು ಗುರುಶ್ರೇಷ್ಠರು. ಅವರು ಗುರುವಿನ ಮಹತ್ವವನ್ನು ಅದ್ಭುತವಾಗಿ ವಿವರಿಸಿದ್ದಾರೆ. ತೋಟಕಾಚಾರ್ಯರು ಶಂಕರರಲ್ಲಿ ತಮ್ಮನ್ನು ಉದ್ಧರಿಸುವಂತೆ ಕೋರುವಾಗ ಗುರುವನ್ನು ಕರುಣಾ ವರುಣಾಲಯ ಎಂದು ಬಣ್ಣಿಸಿದ್ದಾರೆ. ಶಿವ ಶಂಕರಾಚಾರ್ಯರ ಅವತಾರವೆತ್ತಿ ಭೂಮಿಗೆ ಬಂದಿರುವುದು ಕೂಡಾ ಕಾರುಣ್ಯದ ಕಾರಣದಿಂದಲೇ. ಅಜ್ಞಾನವೆಂಬ ಗಾಢಾಂಧಕಾರವನ್ನು ತೊಲಗಿಸಲು ಕರುಣೆಯಿಂದ ಶಂಕರಾಚಾರ್ಯರ ರೂಪ ತಾಳಿ ಜೀವಿಗಳನ್ನು ರಕ್ಷಿಸುವ ಸಲುವಾಗಿ ಭೂಮಿಯಲ್ಲಿ ಪ್ರಕಟವಾದರು ಎಂದು ವಿವರಿಸಿದರು.

ಪತಂಜಲಿ ಮುನಿಗಳು ಲೋಕಕ್ಕೆ ಯೋಗವನ್ನು ಕೊಟ್ಟದ್ದು, ಜೈಮಿನಿಗಳು ಮೀಮಾಂಸ ಶಾಸ್ತ್ರವನ್ನು ನೀಡಿದ್ದು, ಬಾದರಾಯಣ ಸೂತ್ರಗಳನ್ನು ವ್ಯಾಸರು ನೀಡಿದ್ದು ಅತಿಶಯ ಕಾರುಣ್ಯದ ಕಾರಣದಿಂದ. ಜೀವಿಗಳ ಉದ್ಧಾರಕ್ಕಾಗಿ ಬುದ್ಧನವರೆಗೆ ಹಲವು ಮಂದಿ ಕರುಣೆ ಹರಿಸಿದ್ದನ್ನು ನಾವು ಕಾಣಬಹುದು. ಭವದ ಮರುಭೂಮಿಯಲ್ಲಿ ಮರೀಚಿಕೆ ಅರಿಸಿ ತೊಳಲಾಡುವ ಮನುಷ್ಯಕೋಟಿಯನ್ನು ಉದ್ಧರಿಸುವುದು ಗುರುಕೃಪೆಯೆಂಬ ದಿವ್ಯನದಿ ಎಂದು ಬಣ್ಣಿಸಿದರು.

ಸಾಗರ ಶಾಸಕ ಹರತಾಳು ಹಾಲಪ್ಪ ಗುರುವಾರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕರ್ನಾಟಕ ಕಲಾಶ್ರೀ, ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರ ಪುರಾಣ ಪ್ರಪಂಚ- ಭಾಗ 1 ಕೃತಿಯನ್ನು ಶ್ರೀಗಳು ಸಂದರ್ಭ ಬಿಡುಗಡೆ ಮಾಡಿದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀ ಪಾರಾಯಣ, ಗಣಪತಿ ಹವನ, ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಾಮವೇದ ಪಾರಾಯಣ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಳ್ಯದ ಅಕ್ಷಯ್ ಭಟ್ ಮತ್ತು ಸಂಗಡಿಗರು ಕರ್ನಾಟಕ ಸಂಗೀತ ಮತ್ತು ದಾಸರ ಪದಗಳನ್ನು ಹಾಡಿದರು.