ಗೋಕರ್ಣ: ನೆಮ್ಮದಿಯ ಜೀವನದ ಜೊತೆ ಸಮಾಜಮುಖಿಯಾಗಿ ಬದುಕಲು ಆಧ್ಯಾತ್ಮಿಕ ಚಟುವಟಿಕೆ ಪೂರಕವಾಗಿದ್ದು, ಅಂತಹ ಕಾರ್ಯವನ್ನು ಡಿವೈನ್ ಪಾರ್ಕ್ ಮಾಡುತ್ತಿದೆ ಎಂದು ಕುಮಟಾ ವಿವೇಕ ಬಳಗದ ಪ್ರಮುಖ ಕಿರಣ ಪಟಗಾರ ಹೇಳಿದರು. ಅವರು ಇತ್ತೀಚಿಗೆ ಇಲ್ಲಿನ ಶೃಂಗೇರಿ ಓಣಿಯಲ್ಲಿರುವ ವೇ. ಬಾಲಚಂದ್ರ ಸಭಾಹಿತರವರ ಮನೆಯಲ್ಲಿ ಹೊನ್ನಾವರ ಮತ್ತು ಕುಮಟಾ ವಿವೇಕ ಬಳಗದವರಿಂದ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಹರಿಹರೇಶ್ವರ ವೇದ ಪಾಠ ಶಾಲೆ ವಿದ್ಯಾರ್ಥಿಗಳ ವೇದಘೋಷ ನಡೆಯಿತು. ಸುವರ್ಣ ಸಭಾಹಿತ ದೀಪ ಬೆಳೆಗಿಸುವದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವೇ. ಮಹಾಬಲೇಶ್ವರ ಶಾಸ್ತ್ರಿಯವರಿಂದ ಕಲಶಾರ್ಚನೆ, ಹಿರಿಯ ವೈದಿಕರಾದ ವೇ. ಬಾಲಚಂದ್ರ ಚಿಟ್ಟೆ ಭಟ್ ರವರಿಂದ ಗುರು ದತ್ತಾತ್ರೇಯ ಮತ್ತು ಮಾತಾ ಪೂಜೆ ನೆರವೇರಿತು. ವೇ. ಬಾಲಚಂದ್ರ ಸಭಾಹಿತರವರಿಂದ ರಾಮರಕ್ಷಾ ಸ್ತೋತ್ರ ಪಠಣ ನಡೆಯಿತು. ನಂತರ ನಾಲ್ಕು ತಾಸಿಗೂ ಅಧಿಕ ಕಾಲ ಆಧ್ಯಾತ್ಮಿಕ ವಿಷಯಗಳ ಮಂಡನೆ, ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಹೊನ್ನಾವರ ಮತ್ತು ಕುಮಟಾ ವಿವೇಕ ಬಳಗದ ಎನ್.ಎಮ್. ನಾಯ್ಕ, ಮಮತಾ ನಾಯ್ಕ, ರತ್ನಾ ನಾಯ್ಕ, ಟಿ.ಜಿ. ಪಟಗಾರ , ಶ್ರೀಮತಿ ಕಿರಣ ಪಟಗಾರ, ಸುಮನಾ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.