ಗೋಕರ್ಣ: ರಾಜ್ಯದಲ್ಲಿ ಮೊಟ್ಟೆ ಸುದ್ಧಿ ಭಾರೀ ಸದ್ದು ಮಾಡುತ್ತಿದೆ. ಇದರ ಜೊತೆ ಜೊತೆಗೆ ಹೊಸ್ಕಟ್ಟದ ಸದಾನಂದ ದತ್ತಾತ್ರೇಯ ನಾಯ್ಕ್ ರ ಗೋಕರ್ಣ ಮನೆಯಲ್ಲಿ ಕೋಳಿಯೊಂದು ಗಣಪತಿ ಸೊಂಡಿಲು ಹೋಲುವ ಮೊಟ್ಟೆ ಇಟ್ಟಿರುವುದು ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.
ಶ್ರಾವಣದ ಕೊನೆಯ ಸೋಮವಾರವನ್ನು ಎಲ್ಲೆಡೆ ವಿಶೇಷವಾಗಿ ಆಚರಿಸುತ್ತಾರೆ. ಈ ದಿನವೇ ಕೋಳಿಯು ಸಹಜ ಆಕಾರದ ಮೊಟ್ಟೆಯ ಬದಲಾಗಿ ಆನೆಯ ಸೊಂಡಿಲು ಎಡಗಡೆ ತಿರುಗಿದ ಆಕಾರದ ಮೊಟ್ಟೆ ಇಟ್ಟಿದೆ. ವಿವಿಧ ಕೋನದಲ್ಲಿ ನೋಡಿದಾಗ ಅದು ಗಣಪತಿ ಮುಖದಂತೆ ಗೋಚರಿಸುತ್ತಿದ್ದು, ಸುತ್ತ ಮುತ್ತಲಿನ ಜನ ಕುತೂಹಲದಿಂದ ಬಂದು ನೋಡುತ್ತಿದ್ದಾರೆ.
ಸದ್ಯದಲ್ಲೇ ಗಣೇಶ ಹಬ್ಬ ಇದ್ದು, ಮನೆಯಲ್ಲಿ ಹಲವು ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ಜೇಡಿ ಮಣ್ಣಿನಿಂದ ತಯಾರಿಸಿ, ಸುತ್ತಲಿನ ಮನೆಗೆ ಕೊಡುವ ಪದ್ಧತಿ ನಡೆಸಿಕೊಂಡು ಬರಲಾಗಿದೆ. ಈ ಬಾರಿ ಸಹ ತಯಾರಿ ಜೋರಾಗಿಯೇ ನಡೆದಿದೆ. ಆದರೆ ಈ ಸಲ ಮೊಟ್ಟೆಯಲ್ಲಿ ಮೂಡಿಬಂದ ಗಣೇಶ ರೂಪವನ್ನು ಪ್ರದರ್ಶನಕ್ಕೆ ಇರಿಸಿದ್ದು, ಇನ್ನಷ್ಟು ದಿನ ನೋಡಲು ಸಿಗುತ್ತದೆ ಎಂದು ಸದಾನಂದ ನಾಯ್ಕ ಹೇಳಿದ್ದಾರೆ.
ಈ ಮೊಟ್ಟೆಯ ವೈಜ್ಞಾನಿಕ ಕಾರಣ ತಿಳಿಯಲು ವೈದ್ಯರನ್ನು ಸಂಪರ್ಕಿಸಿದಾಗ ಇದು ಗೆಮೇಟುಗಳ ವಿಭಜನೆ ವೇಳೆ ಅಲ್ಪ ಬದಲಾವಣೆಯಾದಾಗ ಈ ರೀತಿಯ ಆಕಾರಗಳು ಉತ್ಪತ್ತಿಯಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.