ಬಳ್ಳಾರಿ: ಕುರುಗೋಡು ಸಮೀಪದ ಕಲ್ಲುಕಂಭ ಗ್ರಾಮದ 1943 ರಲ್ಲಿ ನಿರ್ಮಾಣವಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡದ ಮೇಲ್ಚಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಮಕ್ಕಳು ಹೊರಗಡೆ ಹೋದ ಸಂದರ್ಭದಲ್ಲಿ ಬಿದ್ದಿದ್ದರಿಂದ ಅದೃಷ್ಟವಶಾತ್ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ. ಕಳೆದ ದಿನಗಳ ಹಿಂದೆ ವಾರ ಪೂರ್ತಿ ಸುರಿದ ಮುಂಗಾರು ಮಳೆಯ ಪರಿಣಾಮ ಹಳೆ ಕಟ್ಟಡದ ಮೆಲ್ಚಾವಣಿ ಶಿಥಿಲಗೊಂಡು ಕುಸಿದಿದೆ. ಈಗಾಗಲೇ ಸರಕಾರದಿಂದ ಡಿಎಂಎಪ್ ಯೋಜನೆ ಅಡಿಯಲ್ಲಿ ಶಾಲೆ ಕಟ್ಟಡ ದುರಸ್ತಿಗೆ ಅನುದಾನ ಬಿಡುಗಡೆಗೊಂಡಿದ್ದು, ಅಧಿಕಾರಿಗಳ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ದುರಸ್ತಿ ಕಾರ್ಯಕ್ಕೆ ಮುಂದಾಗದ ಕಾರಣ ಮೇಲ್ಚಾವಣಿ ಕುಸಿದಿದೆ. ಸರಕಾರಿ ಶಾಲೆ ಮೇಲ್ಚಾವಣಿ ಕುಸಿದ ಪರಿಣಾಮ ಮಕ್ಕಳಲ್ಲಿ ಭೀತಿ ಎದುರಾಗಿದೆ.
ಕಲ್ಲಕಂಭ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಒಟ್ಟು 203 ಮಕ್ಕಳಿದ್ದಾರೆ. 5 ಜನ ಖಾಯಂ ಶಿಕ್ಷಕರು ಹಾಗೂ 3 ಜನ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಶಿಕ್ಷಕರು ಇಲ್ಲದ ಕಾರಣ ಶಾಲೆಯ ಶಿಕ್ಷಕರೇ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಶಾಲೆಯ ಹಳೆಯ ಕಟ್ಟಡ ಕುಸಿದ ಕಾರಣ ಪಕ್ಕದಲ್ಲಿರುವ ಇನ್ನೂ ಮೂರು ಕಟ್ಟಡಗಳು ಕೂಡ ಬಿರುಕು ಬಿಟ್ಟು ಅಲ್ಲಲ್ಲಿ ಶಿಥಿಲಗೊಂಡಿವೆ. ಇದರಿಂದ ಕಟ್ಟಡಗಳು ಯಾವಾಗಾದ್ರೂ ಕುಸಿದು ಬೀಳುವ ಸಂಭವವಿರುವ ಕಾರಣ ಹೊಸ ಕಟ್ಟಡಗಳಿಗೆ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದ್ದಾರೆ.
ಹೊಸ ಕಟ್ಟಡಗಳು 6 ಇದ್ದು, ಇದರಲ್ಲಿ ಮೂರು ಚಿಕ್ಕವು ಹಾಗೂ ಮೂರು ದೊಡ್ಡ ಕಟ್ಟಡಗಳಿವೆ. ಇದರಲ್ಲಿ ಒಂದನ್ನು ಅಂಗನವಾಡಿ ಕೇಂದ್ರಕ್ಕೆ ಬಳಕೆ ಮಾಡಲಾಗುತ್ತಿದ್ದು, 5 ಕಟ್ಟಡಗಳಲ್ಲಿ 203 ಮಕ್ಕಳು ಕಲಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಹೆಚ್ಚು ಮಕ್ಕಳು ಇರುವುದರಿಂದ 5 ಕಟ್ಟಡಗಳಲ್ಲಿ ವಿದ್ಯಾಭ್ಯಾಸ ಪಡೆಯುವುದಕ್ಕೆ ತುಂಬಾ ತೊಂದ್ರೆ ಆಗುತ್ತಿದ್ದು ಹೆಚ್ಚುವರಿ ಕೊಠಡಿಗಳ ನಿರೀಕ್ಷೆಯಲ್ಲಿ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಕಾಯುತ್ತಿದ್ದಾರೆ.
ಇನ್ನೂ ಸುಮಾರು ವರ್ಷಗಳಿಂದ ಹಿಂದಿ ಮತ್ತು ಕನ್ನಡ ವಿಷಯಕ್ಕೆ ಶಿಕ್ಷಕರ ಕೊರತೆ ಕಾಡುತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿದೆ. ಇಂತಹ ಪರಿಸ್ಥಿತಿಯಿಂದ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳು ನಶಿಸಿಹೋಗುವಂತಹ ಸನ್ನಿವೇಶಗಳು ಮೇಲ್ನೋಟಕ್ಕೆ ಕಾಣುತ್ತಿರುವುದು ದುರಂತದ ಸಂಗತಿಯಾಗಿದೆ.