ತಾಲೂಕು ಆಡಳಿತದಿಂದ ಶಾಂತಿ ಸಭೆ: ಶಾಂತಿ ಕದಡದಂತೆ ಗಣೇಶೋತ್ಸವ ಆಚರಿಸಲು ಸೂಚನೆ

ಸಿದ್ದಾಪುರ: ಕೋಮು ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕದಡದ ರೀತಿಯಲ್ಲಿ ಶಾಂತಿಯುತವಾಗಿ ಗಣೇಶೋತ್ಸವ ಆಚರಣೆ ಮಾಡುವಂತೆ ತಾಲೂಕಾ ಆಡಳಿತ ಉತ್ಸವ ಸಮಿತಿ ಪದಾಧಿಕಾರಿಗಳಿಗೆ ಸೂಚಿಸಿದೆ. ಈ ಕುರಿತು ಪಟ್ಟಣದ ತಾಲೂಕಾ ಆಡಳಿತ ಸೌಧದಲ್ಲಿ ಗುರುವಾರ ಶಾಂತಿ ಸಭೆ ನಡೆಸಲಾಯಿತು.

ತಾಲೂಕಾ ದಂಡಾಧಿಕಾರಿ ಸಂತೋಷ ಭಂಡಾರಿ ಮಾತನಾಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಮಿತಿಗಳು ಸರ್ಕಾರದ ಅನುಮತಿ ಹಾಗೂ ನಿರಪೇಕ್ಷಣಾ ಪತ್ರ ಕಡ್ಡಾಯವಾಗಿ ಪಡೆಯಬೇಕು. ಪಟಾಕಿ ಕಡಿಮೆ ಪ್ರಮಾಣದಲ್ಲಿ ಬಳಸಿ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಬೇಕು. ಡಿಜೆಗೆ ಪ್ರಸಕ್ತ ಸಾಲಿನಲ್ಲಿ ಅವಕಾಶವಿಲ್ಲ. ಪುಟ್ಟಪ್ಪನ ಕೆರೆ, ಭಗತ್ ಸಿಂಗ್ ಸರ್ಕಲ್ ಮತ್ತಿತರ ಆಯಕಟ್ಟಿನ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಎಂದರು.

ಸಿಪಿಐ ಕುಮಾರ ಕೆ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಸರ್ಕಾರದ ಕೆಲ ಶರತ್ತುಗಳೊಂದಿಗೆ ಹಬ್ಬ ಆಚರಿಸಬೇಕು. ಕೋಮು ಸೌಹಾರ್ದ ಕದಡದ ರೀತಿಯಲ್ಲಿ ಶಾಂತಿಯುತವಾಗಿ ಗಣೇಶ ಚತುರ್ಥಿ ಆಚರಿಸಬೇಕು. ಇದುವರೆಗೆ ಅರ್ಥಪೂರ್ಣವಾಗಿ ಹಬ್ಬ ಆಚರಿಸಿದಂತೆ ಈ ಬಾರಿಯೂ ಸಹಕಾರ ನೀಡಬೇಕು. ಎಲ್ಲಾ ಸಮಿತಿಗಳು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸಿ ಎಂದು ಹೇಳಿದ್ದಾರೆ.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕುಮಾರ ನಾಯ್ಕ ಮಾತನಾಡಿ, ನಿಗದಿತ ಶುಲ್ಕ ಭರಣ ಮಾಡಿ ಅರ್ಜಿ ನೀಡಿದರೆ ತಕ್ಷಣದಲ್ಲಿ ನಿರಕ್ಷೇಪಣಾ ಪತ್ರ ನೀಡಲಾಗುವುದು ಎಂದರು.

ಪಟ್ಟಣ ಪಂಚಾಯತ ಸದಸ್ಯ ಗುರುರಾಜ ಶಾನಭಾಗ ಮಾತನಾಡಿ, ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಅಳವಡಿಸಿದ ಏಕಗವಾಕ್ಷಿ ವ್ಯವಸ್ಥೆ ಗ್ರಾಮೀಣ ಭಾಗದ ಸಮಿತಿಗಳಿಗೂ ಅವಕಾಶ ನೀಡಿ. ಹೆಸ್ಕಾಂನವರು ಹಬ್ಬದ ವೇಳೆ ಒಂದು ವಾರ 24 ಗಂಟೆ ವಿದ್ಯುತ್ ಸಂಪರ್ಕ ನೀಡಬೇಕು. ಗಣೇಶನ ಮೆರವಣಿಗೆ ನಡೆಯುವ ರಸ್ತೆಗಳ ಗುಂಡಿ ಮುಚ್ಚುವ ವ್ಯವಸ್ಥೆ ಮಾಡಿ ಎಂದರು. ಈ ವೇಳೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕುಮಾರ ನಾಯ್ಕ, ಪಿ.ಎಸ್.ಐ ಎಂ.ಜಿ.ಕುಂಬಾರ ಉಪಸ್ಥಿತರಿದ್ದರು.