ಯಲ್ಲಾಪುರ: ತಾಲೂಕಿನ ಅರಬೈಲ್ ಸಮೀಪದ ಫಣಸಗುಳಿ ತಾತ್ಕಾಲಿಕ ಸೇತುವೆಯಿಂದ ನದಿಗೆ ಬಿದ್ದ ಲಾರಿಯಲ್ಲಿ ಸಿಲುಕಿದ ವ್ಯಕ್ತಿಗಾಗಿ ಗುರುವಾರವೂ ಶೋಧ ಕಾರ್ಯ ಮುಂದುವರಿದಿದೆ. ಎಸ್.ಡಿ.ಆರ್.ಎಫ್ ತಂಡ ಸ್ಥಳಕ್ಕೆ ಬಂದಿದ್ದು, ಶೋಧ ಕಾರ್ಯ ನಡೆಸುತ್ತಿದೆ.
ನದಿಯಲ್ಲಿ ನೀರಿನ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದು, ಲಾರಿಯ ಕ್ಯಾಬಿನ್ ಗೋಚರಿಸುತ್ತಿದೆ. ನಿನ್ನೆ ರಾತ್ರಿಯವರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಗುರುವಾರ ಬೆಳಿಗ್ಗೆಯಿಂದ ಮತ್ತೆ ಶೋಧ ನಡೆಸಲಾಗುತ್ತಿದೆ. ಆದರೂ ವ್ಯಕ್ತಿ ಪತ್ತೆಯಾಗಿಲ್ಲ. ಲಾರಿಯಲ್ಲಿ ಸಿಲುಕಿದ್ದ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿರಬಹುದೆಂದು ಹೇಳಲಾಗುತ್ತಿದೆ. ಸ್ಥಳದಲ್ಲಿ ಕ್ರೇನ್, ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಬೀಡುಬಿಟ್ಟಿದ್ದಾರೆ.
ಬುಧವಾರ ಸಂಜೆ ತಾತ್ಕಾಲಿಕ ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ ಚಾಲಕ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿದ ಪರಿಣಾಮ ಲಾರಿ ನದಿಯಲ್ಲಿ ಬಿದ್ದಿತ್ತು. ಗುಳ್ಳಾಪುರದ ಬೋಟ್ ಚಾಲಕರು ತಕ್ಷಣ ಸ್ಥಳಕ್ಕೆ ಬಂದು ಐದು ಜನರನ್ನು ರಕ್ಷಿಸಿದ್ದರು. ಆದರೆ ಲಾರಿಯಲ್ಲಿದ್ದ ಇನ್ನೊಬ್ಬ ಈವರೆಗೂ ಪತ್ತೆಯಾಗಿಲ್ಲ. ಈತನಿಗಾಗಿ ರಕ್ಷಣಾ ತಂಡದಿಂದ ತೀವ್ರ ಶೋಧ ನಡೆಸಲಾಗುತ್ತಿದೆ.