ಚಿಕ್ಕಮಗಳೂರು: ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ 21 ಅಡಿಯ ಬೃಹತ್ ಪರ್ವತಾಂಜನೇಯ ಮೂರ್ತಿ ನಿರ್ಮಾಣಗೊಳ್ಳಲಿದೆ. ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ಚಿಕ್ಕಮಗಳೂರು ತಾಲೂಕಿನ ದತ್ತಪೀಠ ಮಾರ್ಗದ ಕವಿಕಲ್‍ಗಂಡಿ ಎಂಬ ಸ್ಥಳದಲ್ಲಿರುವ ಆಂಜನೇಯನ ಗುಡಿ ಬಳಿ 21 ಅಡಿ ಎತ್ತರದ ಆಂಜನೇಯ ನೆಲೆ ನಿಲ್ಲಲಿದ್ದಾನೆ.
ಈಗಾಗಲೇ ಮೂರ್ತಿ ಕೆತ್ತನೆಗೆ ಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಸಿದ್ಧತೆ ನಡೆದಿದೆ. ತುಮಕೂರಿನ ಶಿರಾದಿಂದ ಕೃಷ್ಣಶಿಲೆ ಕಲ್ಲುಗಳು ನಗರಕ್ಕೆ ಆಗಮಿಸಿದ್ದು, ನಗರದ ದ್ವಾರಬಾಗಿಲು ದಾಸರಹಳ್ಳಿ ಬಳಿ ಕಲ್ಲುಗಳಿಗೆ ಪೂಜೆ ಮಾಡಿ ಪುರಪ್ರವೇಶ ಮಾಡಿಕೊಂಡಿದ್ದಾರೆ. ಕಲ್ಲಿನ ಜೊತೆಗೆ ಕೆತ್ತನೆ ಮಾಡುವ ಶಿಲ್ಪಿಗಳೂ ಸಹ ಆಗಮಿಸಿದ್ದಾರೆ. ಆದರೆ ಮೂರ್ತಿಯನ್ನ ಪ್ರತಿಷ್ಠಾಪಿಸುವ ಜಾಗದಲ್ಲೇ ಕೆತ್ತನೇ ಮಾಡಬೇಕೋ ಅಥವಾ ಬೇರೇಡೆ ಕೆತ್ತನೆ ಮಾಡಿ ಅಲ್ಲಿಗೆ ಕೊಂಡೊಯ್ದು ಪ್ರತಿಷ್ಠಾಪಿಸಬೇಕೋ ಎನ್ನುವ ಚರ್ಚೆಗಳು ನಡೆಯುತ್ತಿವೆ.
ಈ ಮೂರ್ತಿ ಕವಿಕಲ್‍ಗಂಡಿ ಬಳಿ ನೆಲೆ ನಿಂತರೇ ಸುತ್ತಮುತ್ತಲಿನ ಸುಮಾರು 30 ಕಿ.ಮೀ. ದೂರಕ್ಕೂ ಈ ಮೂರ್ತಿ ಕಾಣುತ್ತದೆ. ಸಾವಿರಾರು ಭಕ್ತರು ದತ್ತಪೀಠಕ್ಕೆ ಆಗಮಿಸಿ ಪ್ರಕೃತಿ ಮಧ್ಯೆ ನೆಲೆಸಿರುವ ದತ್ತಾತ್ರೇಯ ದೇವರ ದರ್ಶನ ಮಾಡುತ್ತಿದ್ದಾರೆ. ಅದರ ಜೊತೆಗೆ ಈ ಮೂರ್ತಿ ನೆಲೆ ನಿಂತರೇ ಕಾಫಿನಾಡು ದೇಶದ ಅತ್ಯಂತ ಹೆಸರಾಂತ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.