ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಗಣೇಶ ಹಬ್ಬ ಆಚರಿಸಲು ತಾಲೂಕಾಡಳಿತದ ಸೂಚನೆ

ಭಟ್ಕಳ: ಗಣೇಶ ಹಬ್ಬದ ನಿಮಿತ್ತ ತಾಲೂಕಿನಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಸಾರ್ವಜನಿಕ ಗಣೇಶ ಮಂಡಳಿಗಳೊಂದಿಗೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಸರಕಾರದ ಮಾರ್ಗಸೂಚಿಯನ್ನು ನಗರ ಠಾಣೆ ವ್ರತ್ತ ನಿರೀಕ್ಷಕ ದಿವಾಕರ್ ಪಿ.ಎಮ್. ವಿವರಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಸುತ್ತೋಲೆ ಹೊರಡಿಸಿದೆ.
ಗಣೇಶ ಹಬ್ಬದಲ್ಲಿ ಸಾರ್ವಜನಿಕ ಗಣೇಶೋತ್ಸವದ ಆಚರಣೆಗೆ ಪರವಾನಿಗೆಯನ್ನು ಎಲ್ಲಾ ಇಲಾಖೆಗಳ ಸಮನ್ವಯದಿಂದ ನೀಡುವಂತೆ ಮತ್ತು ಏಕ ಗವಾಕ್ಷಿ ಯೋಜನೆಯಲ್ಲಿ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದೆ.

ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ಸೂಕ್ತವಾಗಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಇನ್ನು ಮುಂತಾದವುಗಳ ಪರವಾನಿಗೆಯನ್ನು ಕಂದಾಯ, ಲೋಕೋಪಯೋಗಿ ಇಲಾಖೆ ಅಗ್ನಿಶಾಮಕ ದಳ ಹಾಗೂ ಪೋಲೀಸ್ ಇಲಾಖೆಗಳಿಂದ ಸಂಯೋಜಿತವಾಗಿ ಅಗತ್ಯವಿರುವ ಏಕ ಗವಾಕ್ಷಿ ಅಡಿಯಲ್ಲಿ ಪಡೆದುಕೊಳ್ಳಲು ಸೂಚಿಸಲಾಗಿದೆ. ಪರವಾನಿಗೆ ಪತ್ರವನ್ನು ನೀಡುವ ಮುನ್ನ ಆಯೋಜಕರು ಕಾಲಕಾಲಕ್ಕೆ ನ್ಯಾಯಾಲಯದ ನಿರ್ದೇಶನಗಳನ್ನು ಹಾಗೂ ಸಂಬoಧಪಟ್ಟ ಇಲಾಖೆಗಳಿಂದ ನೀಡಿರುವ ಸೂಚನೆಗಳನ್ನು ಪಾಲಿಸುವ ಬಗ್ಗೆ ಮುಚ್ಚಳಿಕೆಯನ್ನು ಪಡೆಯಬೇಕು.

ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿ, ಅಗತ್ಯವಿರುವ ಕಡೆಗಳಲ್ಲಿ ಸಿ.ಸಿ. ಕ್ಯಾಮರಾ ಅಳಡವಡಿಸಬೇಕು. ವಿಶೇಷವಾಗಿ ಹೈ- ಟೆನ್ಶನ್ ತಂತಿಗಳು ಹಾದು ಹೋಗಿರುವ ಕಡೆಗಳಲ್ಲಿ ಯಾವುದೇ ಕಾರಣಕ್ಕೂಗಣೇಶಮೂರ್ತಿ ಸ್ಥಾಪಿಸಲು ಅನುಮತಿ ಇಲ್ಲ. ಕಾರ್ಯಕ್ರಮದ ಆಯೋಜಕರು ಮುಂಚಿತವಾಗಿ ನಿಗದಿತ ಸಮಯದ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಎಲ್ಲಾ ಸಂಘ- ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡು ಸಭೆ ನಡೆಸಿ, ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ಅವರು ‘ಗಣಪತಿ ವಿಸರ್ಜನೆಯ ವೇಳೆ ನಿಗದಿ ಮಾಡಿದ ಸಮಯಕ್ಕೆ ಮೆರವಣಿಗೆ ಆರಂಭಿಸಿದ್ದಲ್ಲಿ ಪೋಲೀಸ್ ಇಲಾಖೆಗೆ ಬಂದೋಬಸ್ತಗೆ ಅನೂಕೂಲವಾಗಲಿದೆ. ಇನ್ನು ಮೆರವಣಿಗೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಿ ಅನಾವಶ್ಯಕ ಗದ್ದಲವಿಲದ್ದೇ ನಿಮ್ಮ ಸಮಿತಿಯಿಂದಲೇ ಸ್ವಯಂಸೇವಕರನ್ನು ನೇಮಿಸಿಕೊಂಡಲ್ಲಿ ಇಲಾಖೆಗೆ ಸಹಕಾರಿಯಾಗಲಿದೆ. ಇನ್ನು ಕೆಲ ಪ್ರದೇಶದಲ್ಲಿ ಸಮಿತಿ ಅವರು ಸಿಸಿ ಟಿವಿ ಅಳವಡಿಸಬೇಕಾಗಿದ್ದು ಈ ಕುರಿತು ಸಮಿತಿ ಅವರಿಗೆ ಸೂಚನೆ ನೀಡಲಿದ್ದೇವೆ ಎಂದರು.

ನಂತರ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್. ಅವರು ಮಾತನಾಡಿ, ಎರಡು ವರ್ಷ ಕೋವಿಡ್ ಹಿನ್ನೆಲೆ ಸರಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಯಂತೆ ಹಬ್ಬವನ್ನು ಸಮಿತಿಯವರು ಆಚರಿಸಿದ್ದರು‌. ಆದರೆ ಈ ಬಾರಿ ವಿಜೃಭಣೆಯ ಆಚರಣೆಗೆ ಸರಕಾರದಿಂದ ಅಡೆತಡೆಯಿಲ್ಲವಾಗಿದೆ. ಮುಖ್ಯವಾಗಿ ಶಾಂತಿಯುತ, ಸುವ್ಯವಸ್ಥಿತವಾಗಿ ಹಬ್ಬವನ್ನು ಆಚರಿಸಿ ಸಹಕರಿಸಬೇಕು. ಬರುವಂತಹ ಭಕ್ತರಿಗೆ ಸೂಕ್ತ ದರ್ಶನಕ್ಕೆ ಮಾಡಬೇಕು ಎಂದು ಹೇಳಿದರು.

ಗಣೇಶೋತ್ಸವ ಸಮಿತಿಯವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮೂರು ವಿಭಾಗವಾದ ಸುಂದರ ಪರಿಸರ ಸ್ನೇಹಿ ಗಣಪ, ಸುಂದರ ಅಲಂಕೃತಗೊಂಡ ಗಣೇಶ ಹಾಗೂ ಭಕ್ತರಿಗೆ ದರ್ಶನಕ್ಕೆ ಮಾಡಲಾದ ವ್ಯವಸ್ಥೆಯನ್ನು ಗಮನಿಸಿ ತಾಲೂಕಾಡಳಿತದಿಂದ ಬಹುಮಾನ ನೀಡುವುದಾಗಿ ಸಿಪಿಐ ದಿವಾಕರ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಡಾ. ಸುಮಂತ ಬಿ.ಇ., ಗ್ರಾಮೀಣ ಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ, ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಸುರೇಶ, ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ್, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಮನೆ ಸೇರಿದಂತೆ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.