ಕಾರವಾರ: ಆಟ, ಪಾಠ ಎರಡೂ ಜತೆಯಾಗಿದ್ದರೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆರೋಗ್ಯವಂತರಾಗಿರಲು ಸಾಧ್ಯ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಅಭಿಪ್ರಾಯಪಟ್ಟರು.
ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೋನಾದಿಂದಾಗಿ 2-3 ವರ್ಷಗಳಿಂದ ಕ್ರೀಡಾಕೂಟವನ್ನೇ ನೋಡಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿಗಳೂ ಕೂಡ ಕ್ರೀಡಾಕೂಟಗಳಿಂದ ವಂಚಿತರಾಗಬೇಕಾಯಿತು. ವಿದ್ಯಾರ್ಥಿಗಳ ಆರೋಗ್ಯಕ್ಕೆ ಶಾರೀರಿಕ ಚಟುವಟಿಕೆ ಪೂರಕವಾದುದು. ಆಟ, ಪಾಠ ಎರಡೂ ಜತೆಗಿದ್ದರೆ ಆರೋಗ್ಯವಂತರಾಗಿರಲು ಸಾಧ್ಯ ಎಂದು ತಿಳಿಸಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆದಷ್ಟು ಹೆಚ್ಚು ಮನೆ ಊಟ, ಮನೆಯಲ್ಲಿ ತಯಾರಿಸಿದ ತಿಂಡಿಯನ್ನೇ ತಿನ್ನುವ ಮೂಲಕ ಶಾರೀರಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು. ಒಬ್ಬೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಕ್ರೀಡಾಕೂಟ, ಕ್ರೀಡಾಪಟುಗಳ ಉತ್ಸಾಹವನ್ನು ನೋಡಿ, ಬಾಲ್ಯದ ದಿನಗಳಲ್ಲಿ ನಾನು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮೇಲುಗೈ ಸಾಧಿಸಿದ ನೆನಪು ಮರುಕಳಿಸಿತು. ಚಿಕ್ಕಂದಿನಲ್ಲಿ ನಾನು ಓಟ, ಖೋಖೋ , ಕಬಡ್ಡಿ, ಚಕ್ರ ಎಸೆತ ಗುಂಡು ಎಸೆತ ಎಲ್ಲದರಲ್ಲೂ ಪ್ರಶಸ್ತಿ ಪಡೆಯುತ್ತಿದ್ದೆ. ಕಬಡ್ಡಿಯಲ್ಲಂತೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದಾಗ ಆದ ಸಂತಸ ಅಷ್ಟಿಷ್ಟಲ್ಲ. ಈಗಲೂ ಅಥ್ಲೆಟಿಕ್ಸ್, ಕಬಡ್ಡಿ, ಚಕ್ರ ಎಸೆತ ಮತ್ತಿತರ ಕ್ರೀಡೆಗಳ ಬಗ್ಗೆ ಅಷ್ಟೇ ಆಸಕ್ತಿ ಉಳಿಸಿಕೊಂಡಿದ್ದೇನೆ ಎಂದರು.
ಇನ್ನು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪದವಿಪೂರ್ವ ಇಲಾಖೆಯ ಉಪನಿರ್ದೇಶಕರು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಜರಿದ್ದರು.