ಬೀದಿಬದಿ ಫಾಸ್ಟ್ ಫುಡ್ ಸೆಂಟರ್’ಗಳ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು.! ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಎಚ್ಚರಿಕೆ.!

ಕುಮಟಾ: ಪಟ್ಟಣ ವ್ಯಾಪ್ತಿಯಲ್ಲಿರುವ ಬೀದಿ ಬದಿಯ ಫಾಸ್ಟ್ ಫುಡ್ ಸೆಂಟರ್’ಗಳ ಮೇಲೆ ದಾಳಿ ನಡೆಸಿದ ಆಹಾರ ಗುಣಮಟ್ಟ ಹಾಗೂ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಂಡ ವಿಧಿಸಿ, ಎಚ್ಚರಿಕೆ ನೀಡಿದರು. ಪಟ್ಟಣದ ಗಿಬ್ ವೃತ್ತ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಉದ್ಯಾನವನದ ಸಮೀಪದಲ್ಲಿರುವ ಫಾಸ್ಟ್ ಫುಡ್ ಸೆಂಟರ್’ಗೆ ದಾಳಿ ನಡೆಸಿ, ಆಹಾರ ಗುಣಮಟ್ಟವನ್ನು ಪರೀಕ್ಷಿಸಿದರು.

ಬಣ್ಣ, ಟೇಸ್ಟಿಂಗ್ ಪೌಡರ್ ಹಾಗೂ ಇತರ ವಿಷಕಾರಿ ಪದಾರ್ಥಗಳನ್ನು ಬಳಸದಂತೆ ಎಚ್ಚರಿಕೆ ನೀಡಿದರು. ಹಾನಿಕಾರಕ ವಸ್ತುಗಳಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಹಾರ ಪದಾರ್ಥಗಳನ್ನು ಸರಿಯಾದ ಕ್ರಮದಲ್ಲಿ ಮುಚ್ಚಿಡಬೇಕು. ಪೇಪರ್ ಮುಂತಾದ ವಸ್ತುಗಳಿಂದ ಮುಚ್ಚಿಡುತ್ತಿದ್ದಾರೆ. ಇದರಿಂದ ಪೇಪರ್’ಗಳಲ್ಲಿರುವ ವಿಷಕಾರಿ ವಸ್ತು ಬಿಡುಗಡೆಯಾಗುತ್ತದೆ. ಹಾನಿಕಾರಕ ವಸ್ತುಗಳನ್ನು ಬಳಸಬಾರದು. ಮುಂದಿನ ದಿನಗಳಲ್ಲಿ ಕಂಡುಬಂದರೆ ಅಂತಹ ಅಂಗಡಿಕಾರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ಅಂಗಡಿಕಾರರು ಪುರಸಭೆಯಿಂದ ಪರವಾನಿಗೆ ಪತ್ರ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದರು.

ಆಹಾರ ಗುಣಮಟ್ಟ ಹಾಗೂ ಸುರಕ್ಷತಾ ಇಲಾಖೆ ಅಧಿಕಾರಿ ಡಾ.ರಾಜಶೇಖರ ಮಾತನಾಡಿ, ಕಳೆದ 2 ದಿನಗಳಿಂದ ಜಿಲ್ಲೆಯಾದ್ಯಂತ ರಸ್ತೆ ಬದಿಯ ಫಾಸ್ಟ್ ಫುಡ್ ಸೆಂಟರ್’ಗಳಿಗೆ ಭೇಟಿ ನೀಡಿ, ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಲಾಗುತ್ತಿದೆ. ಹಾನಿಕಾರಕ ವಸ್ತುಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ಫಾಸ್ಟ್ ಫುಡ್ ಸೆಂಟರ್’ನವರು ಬಳಸುವ ಕೆಲವು ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಒಂದು ವೇಳೆ ವಿಷಕಾರಿ ವಸ್ತುಗಳು ದೃಢಪಟ್ಟರೆ ಅಂತಹ ಅಂಗಡಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.

ಈಗಾಗಲೇ ಜಿಲ್ಲೆಯ ಕಾರವಾರದಲ್ಲಿ ಕೆಲ ಅಂಗಡಿಕಾರರ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸ್ವಚ್ಛತೆ ಕಾಪಾಡಿರುವ ಅಂಗಡಿಗಳಿಗೆ ತೆರಳಿ, ಆಹಾರ ವಸ್ತುಗಳನ್ನು ಸೇವಿಸಬೇಕು. ಸಾರ್ವಜನಿಕರಲ್ಲಿಯೂ ಈ ಕುರಿತು ಜಾಗ್ರತಿ ಅತ್ಯವಶ್ಯ ಎಂದ ಅವರು, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಯಾವುದೇ ರೀತಿಯಲ್ಲಿ ಹೊಂದಾಣಿಕೆಯಿಲ್ಲ. ನಿಯಮ ಮೀರಿದ ಅಂಗಡಿಕಾರರ ಮೇಲೆ ಶಿಸ್ತು ಕ್ರಮ ವಹಿಸಲಾಗುತ್ತದೆ. ಈ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತದೆ ಎಂದು ಮಾಹಿತಿ ನೀಡಿದರು. ಕಾರ್ಯಾಚರಣೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಅರುಣ ಕಾಶಿಭಟ್ಟ ಇದ್ದರು.