ಆಯುಷ್ಮಾನ್ ಭಾರತ ಕಾರ್ಡ್ ಮಾಡಿಸಿ, ಯೋಜನೆಯ ಲಾಭ ಪಡೆಯಿರಿ – ಡಿಸಿ ಮುಲ್ಲೈ ಮುಗಿಲನ್

ಕಾರವಾರ: ಆಯುಷ್ಮಾನ್ ಭಾರತ ಕಾರ್ಡ್ ಪಡೆಯುವ ಮೂಲಕ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿವರೆಗೆ ಚಿಕಿತ್ಸೆ ಪಡೆಯಬಹುದಾಗಿದ್ದು, ಸಾರ್ವಜನಿಕರು ಈ ಯೋಜನೆಯ ಲಾಭ ಪಡೆಯಲು ಆಯುಷ್ಮಾನ್ ಭಾರತ ಕಾರ್ಡ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ. ಪಿ. ಹೇಳಿದರು.

ಕಾರವಾರ ತಾಲೂಕಿನ ಸಾವಂತವಾಡ ಹೋಬಳಿಯ ಮುಡಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಂಗಡಿ ಗ್ರಾಮದ ಶಿವನಾಥ ದೇವಸ್ಥಾನ ಸಭಾಭವನದಲ್ಲಿ ಬುಧವಾರ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ಯಲ್ಲಿ ಕಂದಾಯ ಹಾಗೂ ಇತರೆ ಇಲಾಖೆಯ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಗ್ರಾಮ ಒನ್ ಕೇಂದ್ರಗಳ ಮೂಲಕ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳಬೇಕು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆಯು ಶೇ.100 ಯಶಸ್ವಿಯಾಗಲು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಮತ್ತು ಸಹಾಯ ನೀಡಬೇಕು. ಆರೋಗ್ಯ ಇಲಾಖೆಯ ಆರೋಗ್ಯ ಮಿತ್ರರ ಸಹಾಯದಿಂದ 5 ಲಕ್ಷದವರೆಗಿನ ಚಿಕಿತ್ಸೆಗೆ ಕ್ಲೇಮ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಬಳಿಕ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆ, ಗ್ರಾಮ ಪಂಚಾಯತ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ವಿದ್ಯುತ್ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ನಿರ್ಮಿತಿ ಕೇಂದ್ರ ಹಾಗೂ ಇನ್ನಿತರ ಇಲಾಖೆಗಳ ಯೋಜನೆಗಳಲ್ಲಾದ ಸಮಸ್ಯೆಗಳನ್ನು ಆಲಿಸಿ, ರಸ್ತೆ ಸಂಪರ್ಕ, ವಿದ್ಯುತ್‌ಕಂಬ ಮತ್ತು ತಂತಿ ದುರಸ್ತಿ, ಆಂಬುಲೆನ್ಸ್ ಸೇವೆ ಮತ್ತು ವೈದ್ಯರ ಕೊರತೆ, ಸಮುದಾಯ ಆರೋಗ್ಯ ಕೇಂದ್ರ ಮಂಜೂರಿ, ಬಸ್ ಸಂಚಾರ ವ್ಯವಸ್ಥೆ, ಶಿಕ್ಷಕರ ಕೊರತೆ, ಜಮೀನು ವ್ಯಾಜ್ಯಗಳ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹಳಿಯಾಳದಲ್ಲಿ ಗೋಶಾಲೆ ನಿರ್ಮಾಣವಾಗಿದೆ. ಅದರಂತೆ ಕಾರವಾರದ ಮಾಜಾಳಿಯಲ್ಲಿ ಗೋಶಾಲೆ ನಿರ್ಮಾಣ ಮಾಡುವ ಮೂಲಕ ಗೋವುಗಳ ಪಾಲನೆ ಮತ್ತು ಜನಸಾಮಾನ್ಯರು ಗೋವುಗಳಿಂದ ಪಡುತ್ತಿರುವ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಾದ 8 ಮಕ್ಕಳಿಗೆ ಪಾಸ್ ಬುಕ್ ವಿತರಿಸಲಾಯಿತು. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಆಧಾರ ಕಾರ್ಡ ಮತ್ತು ಮತದಾರರ ಗುರುತಿನ ಚೀಟಿಯನ್ನು ಶೇ.100 ಜೋಡಿಸಲು(ಲಿಂಕ್) ಶ್ರಮವಹಿಸಿದ ಬಿ.ಎಲ್.ಒ ಗಳಾದ ಹೇಮಾ ಪಾಯದೇ ಮತ್ತು ಶ್ರೀಕಾಂತ ಹೆಗಡೆ ಜಿಲ್ಲಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾರವಾರ ತಾಲೂಕು ತಹಶೀಲ್ದಾರ ಎನ್. ಎಫ್. ನೊರೋನ್ಹಾ, ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ ಬಾಲಣ್ಣನವರ, ಮುಡಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.