ಕುಮಟಾ: ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಉನ್ನತೀಕರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಮೃತ 2.0 ಯೋಜನೆ ಕೈಗೆತ್ತಿಕೊಳ್ಳಲು 81.65 ಕೋಟಿ ರೂ. ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದರಲ್ಲಿ ಬದಲಾವಣೆ ಅಗತ್ಯವಿದ್ದರೆ ಸರ್ವ ಸದಸ್ಯರು ಸಲಹೆ-ಸೂಚನೆ ನೀಡಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಅಜಯ ಭಂಡಾರ್ಕರ್ ತಿಳಿಸಿದರು.
ಪಟ್ಟಣದ ರಾ.ರಾ.ಅಣ್ಣಾ ಪೈ ಸಭಾಭನದಲ್ಲಿ ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಹೊಸ ನೀರು ಪೂರೈಕೆ ಯೋಜನೆಗೆ ಸರ್ಕಾರ ನಗರ ನೀರು ಸಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಹಣ ಮಂಜೂರಿ ಮಾಡಿದೆ. ಈ ಯೋಜನೆ ಸದ್ಭಳಕೆಯಾಗಬೇಕಿದೆ ಎಂದರು.
ಕರ್ನಾಟಕ ನಗರ ನೀರು ಸಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಜಯ ಪ್ರಭು ಮಾತನಾಡಿ, ಮರಾಕಲ್‌ನಲ್ಲಿ ಹೊಸದಾಗಿ ಪಂಪ್‌ಸೆಟ್ ಅಳವಡಿಕೆಗೆ 3 ಕೋಟಿ, ಮರಾಕಲ್‌ನಿಂದ ಗಿಬ್ ಸರ್ಕಲ್‌ನ ಟ್ಯಾಂಕ್ ವರೆಗೆ 19 ಕಿ.ಮೀ ಪೈಪ್‌ಲೈನ್ ದುರಸ್ಥಿ ಹಾಗೂ ಹೊಸ ಪೈಪ್‌ಲೈನ್ ಜೋಡಣೆಗೆ ಸಂಬಂಧಿಸಿದಂತೆ ಅಂಕಿಅಂಶಗಳ ಮಾಹಿತಿ ನೀಡಿದರು.
ದೀವಳ್ಳಿಯ ನೀರು ಶುದ್ಧೀಕರಣ ಘಟಕದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಹಾಳಾಗಿ ವರ್ಷಾನುಗಟ್ಟಳೆ ಕಳೆದಿದೆ. ಅಲ್ಲಿನ ಸಿಬ್ಬಂದಿಗಳ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೋ ಇಲ್ಲವೋ.? ಎಂಬುದನ್ನು ತಿಳಿಯಲು ಸಾಧ್ಯ. ಹೊಸ ಇನ್ವರ್ಟ್‌ರ್ ಅಳವಡಿಸಿ, ಶೀಘ್ರ ದುರಸ್ಥಿ ಕಾರ್ಯ ಕೈಗೊಳ್ಳಿ ಎಂದು ಪುರಸಭಾ ಮುಖ್ಯಾಧಿಕಾರಿಗೆ ಸದಸ್ಯ ರಾಜೇಶ ಪೈ ಸೂಚಿಸಿದರು.
ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳ ವರ್ಗಾವಣೆ
ಕಚೇರಿಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳನ್ನು ನೇರವಾಗಿ ವರ್ಗಾವಣೆಗೆ ಕ್ರಮ ಕೈಗೊಳ್ಳುತ್ತೇವೆ. 10 ರಿಂದ 15 ವರ್ಷ ಇಲ್ಲಿಯೇ ಬೇರುಬಿಟ್ಟ ಅಧಿಕಾರಿಗಳಿಗೆ ವರ್ಗಾವಣೆ ಮಾಡಿ ಚುರುಕು ಮುಟ್ಟಿಸುವ ಕೆಲಸ ಆಗಬೇಕಿದೆ. ಸರಿಯಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದು ಮುಖ್ಯಾಧಿಕಾರಿಗಳು ತಿಳಿಸಿದಾಗ, ಬೇಜವಾಬ್ದಾರಿ ಅಧಿಕಾರಿಗಳನ್ನು ಇಲ್ಲಿಂದ ವರ್ಗಾವಣೆಗೆ ಕ್ರಮ ಕೈಗೊಳ್ಳಿ. ಸರಿಯಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ನಮ್ಮ ಬೆಂಬಲವಿದೆ ಎಂದು ಸದಸ್ಯರು ತಿಳಿಸಿದರು.
ಉಪಾಧ್ಯಕ್ಷೆ ಸುಮತಿ ಭಟ್ಟ, ಸಭಾ ನಾಯಕಿ ಸುಶೀಲಾ ನಾಯ್ಕ, ಸದಸ್ಯರಾದ ತುಳುಸು ಗೌಡ, ಮೋಹಿನಿ ಗೌಡ, ಪಲ್ಲವಿ ಮಡಿವಾಳ, ಶೈಲಾ ಗೌಡ, ಗೀತಾ ಮುಕ್ರಿ ಸೇರಿದಂತೆ ಮತ್ತಿತರರು ಇದ್ದರು.