ಅಂಕೋಲಾ: ಮಾಂಸಕ್ಕಾಗಿ ಜಿಂಕೆಯನ್ನು ಬೇಟೆಯಾಡಿ ಆಹಾರ ಸಿದ್ಧಪಡಿಸುತ್ತಿರುವಾಗಲೇ ಅರಣ್ಯ ಇಲಾಖೆಯವರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ ಘಟನೆ ತಾಲೂಕಿನ ಹೆಬ್ಬುಳದಲ್ಲಿ ನಡೆದಿದೆ. ರೋಶನ್ ಉಲ್ಲಾಸ ನಾಯ್ಕ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಅಮಿತ ಕಮಲಾಕರ ತಳೇಕರ ತಲೆಮರೆಸಿಕೊಂಡಿದ್ದಾನೆ.
ಮಾಸ್ತಿಕಟ್ಟಾ ಅರಣ್ಯ ವಲಯ ವ್ಯಾಪ್ತಿಯ ಹೆಬ್ಬುಳ ಗ್ರಾಮದ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮನೆಯಲ್ಲಿ ಮಾಂಸ ಬೇಯಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ ಕೆ ಸಿ ಮತ್ತುಅಂಕೋಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಅಣ್ಣಯ್ಯ ಗೌಡ ಇವರ ಮಾರ್ಗದರ್ಶನದಲ್ಲಿ ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿ ಪಿ ನಾಯ್ಕ ಮತ್ತು ಉಪ ವಲಯ ಅರಣ್ಯಾಧಿಕಾರಿ ಅರುಣ ನಡಕಟ್ಟಿನ, ಮಲ್ಲಿಕಾರ್ಜುನ ಅಂಗಡಿ, ನವೀನ ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.
ಇನ್ನು ಬಂಧಿತನಿಂದ ಒಂದು ನಾಡಬಂದೂಕು, ಜಿಂಕೆಯ ಚರ್ಮ, ಜಿಂಕೆಯ ಪಾದ ಸೇರಿದಂತೆ ಬೇಯಿಸಿದ ಮಾಂಸ ಹಾಗೂ ಇನ್ನಿತರೇ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿ ನಡೆಸಿದ ತಂಡದಲ್ಲಿ ಅರಣ್ಯ ರಕ್ಷಕರಾದ ಚನ್ನಪ್ಪ ಲಮಾಣಿ, ವೆಂಕಟೇಶ ಚೆನ್ನಯ್ಯ, ರುದ್ರಗೌಡ ಪಾಟೀಲ, ಅಬಲೆಪ್ಪ ಧರೆಣ್ಣವರ, ಪ್ರಶಾಂತ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.



