ಕಾರವಾರ ಫುಡ್ ಕೋರ್ಟ್ ಮೇಲೆ ಅಧಿಕಾರಿಗಳಿಂದ ದಿಢೀರ್ ದಾಳಿ.! ಆಹಾರದ ಗುಣಮಟ್ಟ ಪರಿಶೀಲನೆ.!

ಕಾರವಾರ: ರಸ್ತೆ ಬದಿ ಆಹಾರ ವಸ್ತು ವ್ಯಾಪಾರಸ್ಥರು ಆಹಾರ ತಯಾರಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದ ಹಿನ್ನಲೆ ಇಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ನಗರದ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಫುಡ್‌ಕೋರ್ಟ್‌ಗೆ ಸಂಜೆ ವೇಳೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ಚಾಟ್ಸ್, ಸಾಫ್ಟ್ ಡ್ರಿಂಕ್ಸ್ ವ್ಯಾಪಾರಸ್ಥರ ಅಂಗಡಿಗಳನ್ನ ಪರಿಶೀಲನೆ ನಡೆಸಿದರು.

ಬೀದಿಬದಿಯ ಆಹಾರವಸ್ತು ವ್ಯಾಪಾರಸ್ಥರು ಫುಡ್ ಕಲರ್, ಟೇಸ್ಟಿಂಗ್ ಪೌಡರ್‌ನಂತಹ ಅನವಶ್ಯಕ ಪದಾರ್ಥಗಳನ್ನ ಬಳಸಿ ಆಹಾರ ತಯಾರಿಸುತ್ತಾರೆ. ಹೀಗಾಗಿಯೇ ಮಕ್ಕಳು ಇಂತಹ ಫಾಸ್ಟ್ ಫುಡ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಕಳೆದ ಹಲವು ದಿನಗಳಿಂದ ಇಂತಹ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ರಾಜಶೇಖರ್ ತಮ್ಮ ತಂಡದೊಂದಿಗೆ ಖುದ್ದು ದಾಳಿ ನಡೆಸಿದ್ದಾರೆ.

ಈ ವೇಳೆ ಕೆಲ ವ್ಯಾಪಾರಸ್ಥರು ದಿನಪತ್ರಿಕೆಗಳಲ್ಲಿ ಆಹಾರವನ್ನು ಪ್ಯಾಕ್ ಮಾಡಿ ಕೊಡುತ್ತಿರುವುದು ಗಮನಕ್ಕೆ ಬಂದಿದ್ದು ಈ ಕುರಿತು ಅಂಗಡಿಕಾರರಿಗೆ ಎಚ್ಚರಿಕೆ ನೀಡಿದ್ದಾರೆ. ದಿನಪತ್ರಿಕೆ ಮುದ್ರಣದಲ್ಲಿ ಬಳಸುವ ಇಂಕ್‌ನಲ್ಲಿ ಅಪಾಯಕಾರಿ ಲೆಡ್ ರಾಸಾಯನಿಕ ಮಿಶ್ರಣವಾಗಿರುತ್ತದೆ. ಇದು ಕರಿದ ತಿಂಡಿಯಂತಹ ಆಹಾರ ವಸ್ತುಗಳ ಸಂಪರ್ಕದಲ್ಲಿ ಬರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಹಾನಿಕಾರಕವಾಗಿದೆ.

ಹೀಗಾಗಿ ಆಹಾರ ವಸ್ತುಗಳ ಪ್ಯಾಕಿಂಗ್‌ಗೆ ದಿನಪತ್ರಿಕೆ ಬಳಸದಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಕೆಲವರು ಪಾನೀಪುರಿಯಲ್ಲಿ ಬಳಸುವ ಬಣ್ಣ ಬಣ್ಣದ ನೀರಿಗೆ ರಾಸಾಯನಿಕ ಬಳಸಿ ರುಚಿಕರವಾಗಿಸುತ್ತಾರೆ ಎನ್ನುವ ಶಂಕೆ ವ್ಯಕ್ತವಾದ ಹಿನ್ನಲೆ ಅದರ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲು ಅವುಗಳ ಮಾದರಿಯನ್ನ ಸಹ ಸಂಗ್ರಹಿಸಲಾಗಿದೆ.

ಇಂದಿನ ದಾಳಿ ವೇಳೆ ಯಾವುದೇ ವ್ಯಾಪಾರಸ್ಥರು ಆಹಾರ ಸುರಕ್ಷತೆಯನ್ನ ಉಲ್ಲಂಘಿಸಿರುವುದು ಕಂಡುಬಂದಿಲ್ಲವಾಗಿದ್ದು ಆಹಾರ ತಯಾರಿಕೆಯಲ್ಲಿ ಗುಣಮಟ್ಟವನ್ನ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಯಾವುದೇ ವ್ಯಾಪಾರಸ್ಥರು ಮತ್ತೆ ದಿನಪತ್ರಿಕೆ ಬಳಸಿ ಆಹಾರ ಪ್ಯಾಕಿಂಗ್ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.