ಹೊನ್ನಾವರ: ರಾಜ್ಯ ಯೋಗಾಸನ ಕ್ರೀಡಾ ಸಂಘದಿಂದ ಬೆಂಗಳೂರಿನ ಡಾ. ರಾಜಕುಮಾರ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದ್ದ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ 2022 ರಲ್ಲಿ ತಾಲೂಕಿನ ನಾಥಗೇರಿಯ ಮಹೇಂದ್ರ ಗಣಪತಿ ಗೌಡ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಆಯ್ಕೆಯಾದ ವಿದ್ಯಾರ್ಥಿ ಮಹೇಂದ್ರ ಪಟ್ಟಣದ ದಿ. ಮೋಹನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ. ಈತನಿಗೆ ಖರ್ವಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ, ಯೋಗಪಟು ರಾಜೇಶ್ವರಿ ಹೆಗಡೆ ತರಬೇತಿ ನೀಡಿದ್ದರು. ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್‌ನ 4 ವರ್ಷ ಹಾಗೂ 27 ವರ್ಷದ ವಯೋಮಾನದ ಕ್ರೀಡಾಪಟುಗಳಿಗೆ ತೀರ್ಪುಗಾರರಾಗುಯೂ ಸಹ ಇವರು ಪಾಲ್ಗೊಂಡಿದ್ದರು.
ಸಾಂಪ್ರದಾಯಿಕ ಯೋಗಾಸನ, ಆರ್ಟಿಸ್ಟಿಕ್ ಯೋಗಾಸನ, ರಿದಮಿಕ್ ಯೋಗಾಸನ ಮಾದರಿಯಲ್ಲಿ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ವಿಜೇತರಾದ ಪ್ರತಿ ವಿಭಾಗದ ತಲಾ ಐವರು ನವೆಂಬರ್ 26 ಹಾಗೂ 27 ರಂದು ಮುಂಬೈನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾರೆ.