ಕೋಣಾರ ಭಾಗದಲ್ಲಿ ಚಿರತೆಗಳ ಓಡಾಟ ದೃಶ್ಯ ಸೆರೆ; ಆತಂಕ

ಭಟ್ಕಳ:
ಮನೆಗೆ ಬರುವ ರಸ್ತೆಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾದ ಚಿರತೆಗಳು, ಮನೆಯೊಡೆಯ ಸೇರಿ ಗ್ರಾಮಸ್ಥರೇ ಕಂಗಾಲು. ಇದು ಎಲ್ಲಿಯೋ ದಟ್ಟ ಕಾನನದ ನಡುವೆ ಇದ್ದ ಮನೆಯ ರಸ್ತೆಯಲ್ಲ. ಬದಲಾಗಿ ತಾಲೂಕಿನ ಕೋಣಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣಾರದ ವಸತಿ ಪ್ರದೇಶದಲ್ಲಿರುವ ಮಂಜುನಾಥ ಹೆಬ್ಬಾರ್ ಅವರ ಮನೆಯ ರಸ್ತೆಯಲ್ಲಿ ಸೆರೆಯಾದ ದೃಶ್ಯ.

ರವಿವಾರ ರಾತ್ರಿ 11 ಗಂಟೆಯ ಸುಮಾರಿಗೆ ಕೋಣಾರದ ಮಂಜುನಾಥ ಹೆಬ್ಬಾರ್ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿ.ಸಿ.ಟಿ.ವಿ. ದೃಶ್ಯದಲ್ಲಿ ಎರಡು ಚಿರತೆಗಳು ಒಂದಾದ ನಂತರ ಒಂದರಂತೆ ಅವರ ಮನೆಗೆ ಬರುವ ರಸ್ತೆಯಲ್ಲಿ ಗಾಂಭೀರ್ಯದಿಂದ ನಡೆದುಕೊಂಡು ಬರುತ್ತಿರುವ ನೋಟ ದಾಖಲಾಗಿತ್ತು. ಇದನ್ನು ಕಂಡ ಮನೆಯವರು ಗಾಬರಿಯಾಗಿದ್ದು ಸುದ್ದಿ ತಿಳಿಯುತ್ತಲೇ ಗ್ರಾಮಸ್ಥರು ಜಾಗೃತರಾಗಿದ್ದಾರಲ್ಲದೇ ಭಯವೂ ಮೂಡಿದೆ ಎನ್ನಲಾಗಿದೆ.

ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸಂಜೆಯ ಓಡಾಡುವುದಕ್ಕೂ ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆನ್ನಲಾಗಿದೆ. ಈಗಾಗಲೇ ಊರಿನಲ್ಲಿರುವ ನಾಯಿಯೊಂದು ಕಣ್ಮರೆಯಾಗಿದ್ದು ಚಿರತೆಗೆ ಆಹಾರವಾಯಿತೇ? ಎನ್ನುವುದು ಗ್ರಾಮಸ್ಥರ ಸಂಶಯವಾಗಿದೆ.

ಚಿರತೆ ಕಂಡಿರುವುದು ನಿಜ ವಲಯ ಅರಣ್ಯಾಧಿಕಾರಿ ವಿಶ್ವನಾಥ ವಿ.: ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆಯ ಓಡಾಟವನ್ನು ಇಲಾಖೆಯೂ ಕೂಡಾ ಗಮನಿಸಿದೆ. ಸಿಬ್ಬಂದಿ ರಾತ್ರಿ ಗಸ್ತು ಹೋಗುವ ಸಮಯದಲ್ಲಿ ಚಿರತೆಗಳು ಆ ಭಾಗದಲ್ಲಿ ಕಾಣಿಸಿಕೊಂಡಿದ್ದು ಆಹಾರ ಆರಸಿ ಬರುತ್ತಿವೆ ಎಂದು ಹೇಳಿದ್ದಾರೆ. ಜನವಸತಿ ಪ್ರದೇಶಕ್ಕೆ ಬಂದರೆ ಹಾಗೂ ಜನ ಜಾನುವಾರುಗಳಿಗೆ ತೊಂದರೆ ಕೊಟ್ಟರೆ ಅವುಗಳನ್ನು ಅಲ್ಲಿಂದ ಸ್ಥಳಾಂತರಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ. ಹಾಲಿ ಚಿರತೆಗಳನ್ನು ರಾತ್ರಿ ಗಸ್ತು ಹೆಚ್ಚು ಮಾಡಿ ಆ ಭಾಗದಿಂದ ದಟ್ಟಡವಿಯ ಕಡೆಗೆ ಹೋಗುವಂತೆ ಪಟಾಕಿ ಸಿಡಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ.