“ದೇವರ ದೃಷ್ಠಿಯಲ್ಲಿ ಎಲ್ಲರೂ ಸಮಾನರು ಎನ್ನುವ ರೀತಿಯ ಸಮಾನತೆಗಿಂತ, ಸಾಮಾಜಿಕ ಸಮಾನತೆಯನ್ನು ಡಾ ಬಿ.ಆರ್ ಅಂಬೇಡ್ಕರ ಬಯಸಿದ್ದರು” ಎಂದು ತಾಲೂಕ ಆಸ್ಪತ್ರೆ ಹೊನ್ನಾವರದ ಸ್ತ್ರೀ ರೋಗ ತಜ್ಞರಾದ ಡಾ. ಕೃಷ್ಣಾ ಜಿ ಹೇಳಿದರು.

ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ರು. “ಅಂಬೇಡ್ಕರ್ ಸಂವಿಧಾನ ರಚಿಸುವ ಸಂದರ್ಭದಲ್ಲಿ ಸಮಾಜದಲ್ಲಿ ಸಮಾನತೆ ಅನ್ನುವುದು ದೂರದ ಮಾತಾಗಿತ್ತು. ಜಾತಿ ಪದ್ಧತಿ ತಾಂಡವ ಆಡುತ್ತಿತ್ತು. ಕೆಳವರ್ಗದ ಜನ ತುಂಬಾ ಹೀನಾಯವಾಗಿ ಜೀವನ ನಡೆಸುತ್ತಿದ್ದರು. ಮಹಿಳೆಯರಿಗೆ ಪುರುಷರಂತೆ ಸಮಾನ ಅವಕಾಶಗಳನ್ನು ಒದಗಿಸಿಕೊಡುವ ಅಂಶಗಳು ಸಂವಿಧಾನದಲ್ಲಿ ಇರುವಂತೆ ನೋಡಿಕೊಂಡರು. ಇದರ ಪರಿಣಾಮ ಇವತ್ತು ನಾವೆಲ್ಲ ಒಂದು ಉತ್ತಮ ಬದುಕು ನಡೆಸಲು ಕಾರಣವಾಗಿದೆ. ಮೊದಲೆಲ್ಲ ಅಂಬೇಡ್ಕರ್ ದಲಿತ ನಾಯಕರು ಎಂದು ಅಷ್ಟಕ್ಕೆ ಸೀಮಿತಗೊಳಿಸುವ ಪ್ರಯತ್ನಮಾಡಲಾಗಿತ್ತು. ಆದರೆ ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ಡಾ. ಬಿ.ಆರ್ ಅಂಬೇಡ್ಕರ್ ಎಲ್ಲರಿಗೂ ಸಲ್ಲಬೇಕಾದವರು. ಅವರೊಬ್ಬರು ವಿಶ್ವಶಕ್ತಿಯಾಗಿದ್ದರು. ಇವತ್ತು ನಾವು ಸಂವಿಧಾನದ ಆಶಯಗಳನ್ನು ಗೌರವಿಸುವುದು ಮತ್ತ ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿ ಮಾತನಾಡಿ “ಅಂಬೇಡ್ಕರ್ ರವರ ಆದರ್ಶಗಳನ್ನು ಪಾಲಿಸುವುದರ ಮೂಲಕ ಉತ್ತಮ ಸಮಾಜ ಕಟ್ಟೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಎಲ್ಲ ವೈದ್ಯಾಧಿಕಾರಿಗಳು, ಸಿಬ್ಬಂಧಿವರ್ಗ, ಸಾರ್ವಜನಿಕರು ಭಾಗವಹಿಸಿದರು. ಸಿಬ್ಬಂದಿಗಳಾದ ದೇವಿದಾಸ ಎಸ್ ಗುನಗಿ ಕಾರ್ಯಕ್ರಮ ನಿರ್ವಹಿಸಿದರು.
