ಹೊನ್ನಾವರದಲ್ಲಿ ‘ಎಂ.ಪಿ.ಇ. ಎಸ್.ಡಿ.ಎಂ ಸಂಭ್ರಮ 2026’ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ

ಹೊನ್ನಾವರ:
ಪಟ್ಟಣದ ಪ್ರತಿಷ್ಠಿತ ಎಂ.ಪಿ.ಇ ಸೊಸೈಟಿಯ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಎಂ.ಪಿ.ಇ. ಎಸ್.ಡಿ.ಎಂ ಸಂಭ್ರಮ 2026’ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವು ಅತ್ಯಂತ ಉತ್ಸಾಹ ಮತ್ತು ಸಡಗರದಿಂದ ಜರುಗಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದ ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಉದ್ಯಮಿ ಆನಂದ ಭಟ್ಟ ಮಾತನಾಡಿ, “ಯಾವುದೇ ಶಿಕ್ಷಣ ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲು ಹಳೆಯ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ. ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕ ಮತ್ತು ಆತ್ಮೀಯ ಬಾಂಧವ್ಯ ಹೊಂದಿರಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹತ್ತಾರು ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು,” ಎಂದರು. ಇದೇ ಸಂದರ್ಭದಲ್ಲಿ ಸಂಸ್ಥೆಗೆ ವಿಶೇಷ ಕೊಡುಗೆಯಾಗಿ, ಪ್ರಸಕ್ತ ಸಾಲಿನಲ್ಲಿ ಇಲ್ಲಿನ ಸಿಬಿಎಸ್‌ಇ ಶಾಲೆಗೆ ವಿಜ್ಞಾನ ಪ್ರಯೋಗಾಲಯ ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದ ಅವರು, ಇಂತಹ ಸೌಲಭ್ಯಗಳಿಂದ ಪ್ರತಿಯೊಂದು ಮನೆಯಲ್ಲೂ ವಿಜ್ಞಾನಿಗಳು ಸೃಷ್ಟಿಯಾಗಲು ಸಾಧ್ಯ ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಲ್ಮಾಡಿಯ ಆಸ್ಸೆಮ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಪವನ್ ಕಿರಣ್ ಕೆರೆ ಮಾತನಾಡಿ, “ಭಾರತೀಯ ಶಿಕ್ಷಣ ಪದ್ಧತಿಯು ಮನುಷ್ಯನಿಗೆ ಜೀವನದ ಪೂರ್ಣತೃಪ್ತಿಯನ್ನು ನೀಡುತ್ತದೆ. ಶಿಕ್ಷಕರು ಕೇವಲ ಪಠ್ಯಕ್ಕೆ ಸೀಮಿತವಾಗಬಾರದು; ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಧಾರೆ ಎರೆಯಬೇಕು. ಕೇವಲ ಮಾಹಿತಿ ನೀಡುವುದಷ್ಟೇ ಶಿಕ್ಷಣವಾಗಿದ್ದರೆ ಆ ಸ್ಥಾನವನ್ನು ಎಐ ಅಥವಾ ರೋಬೋಟ್‌ಗಳು ತುಂಬಬಲ್ಲವು. ಆದರೆ, ಸಂಸ್ಕೃತಿಯನ್ನು ನೀಡಲು ಗುರುವಿನ ಅಗತ್ಯವಿದೆ,” ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಮಾತನಾಡಿ, “ಸಂಸ್ಥೆಯ ಯಶಸ್ಸಿನ ಹಿಂದೆ ಹಳೆಯ ವಿದ್ಯಾರ್ಥಿಗಳ ಬೆಂಬಲ ಶಕ್ತಿಯಾಗಿ ನಿಂತಿದೆ. ದಾನಿಗಳ ಸಹಕಾರ ಇತರರಿಗೂ ಪ್ರೇರಣೆಯಾಗಲಿ. ಪ್ರತಿ ವರ್ಷ ಡಿಸೆಂಬರ್ 24ರಂದು ಈ ಪುನರ್ಮಿಲನ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ,” ಎಂದು ಘೋಷಿಸಿದರು.

ಇದೇ ವೇಳೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಪ್ರಾಂಶುಪಾಲರು,ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ ಕಾಮತ್, ಕಾರ್ಯದರ್ಶಿ ಎಸ್.ಎಂ.ಭಟ್, ನಾಗರಾಜ ಕಾಮತ್, ಸುರೇಶ ಶೇಟ್, ಪ್ರಾಚಾರ್ಯರಾದ ಡಾ. ಜಿ.ಎಂ.ಭಟ್, ಎಮ್.ಎಚ್.ಭಟ್, ಡಾ. ವಿಜಯಲಕ್ಷ್ಮೀ ನಾಯಕ, ರಾಜು ಮಾಳಗಿಮನೆ, ಶಿವರಾಮ ಶಾಸ್ತ್ರಿ ಹಾಗೂ ಪಿ.ಎಂ.ಹೊನ್ನಾವರ ಉಪಸ್ಥಿತರಿದ್ದರು.ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ.ಡಿ.ಎಲ್.ಹೆಬ್ಬಾರ ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ, ಬಿಂದು ಅವಧಾನಿ ಕಾರ್ಯಕ್ರಮ ನಿರ್ವಹಿಸಿದರು.