ಕರ್ನಾಟಕದಲ್ಲಿ ಆಟೋ ಎಲ್‌ಪಿಜಿ ತೀವ್ರ ಕೊರತೆ ಉಂಟಾಗಿ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಎಲ್‌ಪಿಜಿ ಲಭ್ಯತೆ ಕಡಿಮೆಯಾಗಿದ್ದು, ಖಾಸಗಿ ಪಂಪ್‌ಗಳ ಸ್ಥಗಿತದಿಂದ ಇಂಧನಕ್ಕಾಗಿ ಚಾಲಕರು ಪರದಾಡುತ್ತಿದ್ದಾರೆ. ಈ ಹಿನ್ನೆಲೆ ಇಂಡಿಯನ್ ಆಯ್ಲ್ ಆಟೋ ಎಲ್‌ಪಿಜಿ ಪೂರೈಕೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಜೊತೆಗೆ, ಡ್ಯುಯಲ್ ಫ್ಯೂಯಲ್ ವ್ಯವಸ್ಥೆ ಹೊಂದಿರುವವರು ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಸಲಹೆ ನೀಡಿದೆ.

ಕರ್ನಾಟಕದಲ್ಲಿ ಆಟೋ ಎಲ್‌ಪಿಜಿ ಕೊರತೆ ಸಮಸ್ಯೆ ದಿನೇದಿನೇ ಗಂಭೀರವಾಗುತ್ತಿದ್ದು, ಇದರ ಪರಿಣಾಮವಾಗಿ ಆಟೋ ಚಾಲಕರ ಜೀವನಸಂಕಷ್ಟಕ್ಕೆ ಸಿಲುಕಿದೆ. ಇಂಡಿಯನ್ ಆಯ್ಲ್ ಕಾರ್ಪೋರೇಶನ್ ಲಿಮಿಟೆಡ್ (ಐಒಸಿಎಲ್) ಸಂಸ್ಥೆ ಕರ್ನಾಟಕದಾದ್ಯಂತ ಆಟೋ ಎಲ್‌ಪಿಜಿ ಪೂರೈಕೆಯನ್ನು ಹೆಚ್ಚಿಸಿರುವುದಾಗಿ ಭಾನುವಾರ ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 72 ಆಟೋ ಎಲ್‌ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 55 ಅನ್ನು ಐಒಸಿಎಲ್ ನಿರ್ವಹಿಸುತ್ತದೆ. 300ಕ್ಕೂ ಹೆಚ್ಚು ಖಾಸಗಿ ಡಿಸ್ಪೆನ್ಸಿಂಗ್ ಕೇಂದ್ರಗಳಿದ್ದರೂ, ಸುಮಾರು 80 ಪ್ರತಿಶತ ಸ್ಥಗಿತಗೊಂಡಿರುವುದರಿಂದ ಪೂರೈಕೆಗೆ ಸಮಸ್ಯೆ ಉಂಟಾಗಿದೆ. ಮೂಲಸೌಕರ್ಯ ಕೊರತೆ ಮತ್ತು ಪೂರೈಕೆ ಸಾಮರ್ಥ್ಯದ ಅಭಾವದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.
ಬೆಂಗಳೂರಿನಲ್ಲಿ ಸರ್ಕಾರಿ ಪಂಪ್‌ಗಳಲ್ಲಿ ಲೀಟರ್‌ಗೆ 89.52 ರೂ. ದರದಲ್ಲಿ LPG ಲಭ್ಯವಿದ್ದರೆ, ಖಾಸಗಿ ಪಂಪ್‌ಗಳಲ್ಲಿ ಬೆಲೆ 99ರಿಂದ 105 ರೂಪಾಯಿವರೆಗೆ ಇರುವುದರಿಂದ ಜನರು ಹೆಚ್ಚಾಗಿ ಸರ್ಕಾರಿ ಪಂಪ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಪಂಪ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ರಾಜ್ಯದಲ್ಲಿನ ಸುಮಾರು 70 ಪ್ರತಿಶತ ಆಟೋಗಳು ಡ್ಯುಯಲ್ ಫ್ಯೂಯಲ್ ವ್ಯವಸ್ಥೆ ಹೊಂದಿರುವುದರಿಂದ ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಐಒಸಿಎಲ್ ಸಲಹೆ ನೀಡಿದೆ.
ನಿರ್ಲಕ್ಷ್ಯ ಆರೋಪಕ್ಕೆ ಸರ್ಕಾರದ ವಿರುದ್ಧ ಕಿಡಿ
ಇದರ ನಡುವೆ,ಹಲವು ಆಟೋ ಚಾಲಕರ ಸಂಘಟನೆಗಳು ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿವೆ. ಆದಾಯ ಕುಸಿತ ಮತ್ತು ಇಂಧನ ಕೊರತೆಯಿಂದ ಚಾಲಕರು ಇಎಮ್ಐ, ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಶುಲ್ಕಗಳನ್ನು ಪಾವತಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ.
ಪ್ರತಿ ಆಟೋಗೆ ದಿನಕ್ಕೆ ಕನಿಷ್ಠ 6 ಲೀಟರ್ ಎಲ್‌ಪಿಜಿ ಪೂರೈಕೆ ಖಚಿತಪಡಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಬೆಂಗಳೂರಿನಲ್ಲಿ ದಿನನಿತ್ಯ ಸುಮಾರು 300 ಟನ್ ಎಲ್‌ಪಿಜಿ ಅವಶ್ಯಕವಿದ್ದು, ಈ ಸಮಸ್ಯೆ ತಕ್ಷಣ ಪರಿಹಾರವಾಗಬೇಕೆಂದು ಒತ್ತಾಯಿಸಲಾಗಿದೆ. ಜೊತೆಗೆ, ಸಿಎನ್ಜಿ ಪರಿವರ್ತನೆಗೆ ಸರ್ಕಾರ ನೆರವು ನೀಡಬೇಕೆಂದು ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿವೆ
