ಬಿಜೆಪಿ ಸೇರಿದ್ರೆ ಕೇಸ್ ಖುಲಾಸೆ ಮಾಡ್ತಾರಂತೆ – ಮನೀಶ್ ಸಿಸೋಡಿಯಾ ಆರೋಪ

ನವದೆಹಲಿ: ಬಿಜೆಪಿ ಪಕ್ಷವನ್ನು ಸೇರಿದರೇ ತಮ್ಮ ಮೇಲಿನ ಇಡಿ, ಸಿಬಿಐ ಪ್ರಕರಣಗಳಿಂದ ಮುಕ್ತಗೊಳಿಸುವ ಆಫರ್ ನೀಡಲಾಗಿದೆ ಎಂದು ದೆಹಲಿಯ ಡಿಸಿಎಂ, ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಆರೋಪ ಮಾಡಿದ್ದಾರೆ‌. ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಈ ಕುರಿತು ಗಂಭೀರ ಆರೋಪ ಮಾಡಿದ್ದಾರೆ.

ಹೊಸ ಮದ್ಯನೀತಿಗೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ಕುರಿತು ಆಮ್ ಅದ್ಮಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು‌.

ಇಂದು ಈ ಬಗ್ಗೆ ಟ್ವೀಟ್ ಮಾಡಿ, ಎಎಪಿ ಬಿಟ್ಟು ಬಿಜೆಪಿಗೆ ಸೇರಿಕೊಳ್ಳಿ, ಎಲ್ಲಾ ಸಿಬಿಐ, ಇಡಿ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತೇವೆ ಎಂದು ಬಿಜೆಪಿಯ ಸಂದೇಶ ಕಳಿಸಿತ್ತು. ನಾನು ರಜಪೂತ, ಮಹಾರಾಣಾ ಪ್ರತಾಪ್ ವಂಶಸ್ಥ. ನನ್ನ ತಲೆಯನ್ನು ಕತ್ತರಿಸುತ್ತೇನೆ ಎಂದರೂ ಭ್ರಷ್ಟ-ಪಿತೂರಿಗಾರರ ಮುಂದೆ ತಲೆಬಾಗುವುದಿಲ್ಲ. ನನ್ನ ಮೇಲಿರುವ ಕೇಸುಗಳೆಲ್ಲ ಸುಳ್ಳು, ಏನು ಬೇಕಾದರೂ ಮಾಡಿ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿವಾದಾತ್ಮಕ ಅಬಕಾರಿ ನೀತಿಯು ದೇಶದಲ್ಲಿಯೇ ಅತ್ಯುತ್ತಮವಾಗಿದೆ. ನಾನು ಅದಕ್ಕೂ ಬದ್ಧನಾಗಿದ್ದೇನೆ. ಕೇಜ್ರಿವಾಲ್ ಮಾದರಿಯ ಆಡಳಿತ ಮತ್ತು ಎಷ್ಟು ಸಚಿವರನ್ನು ತನಿಖೆ ಮಾಡಿ ಜೈಲಿಗೆ ಹಾಕಿದರೂ ಕೆಲಸ ನಿಲ್ಲುವುದಿಲ್ಲ ಎಂದು ಸಿಸೋಡಿಯಾ ಹೇಳಿದರು.