ಕಲಿಕೆಯ ಜೊತೆ ಕೃಷಿಯಲ್ಲೂ ಸೈ ಎನಿಸಿಕೊಂಡ ವಿದ್ಯಾರ್ಥಿಗಳು.! ಪಠ್ಯಪುಸ್ತಕ ಹಿಡಿಯುವ ಕೈಯಲ್ಲಿ ಭತ್ತ ನಾಟಿ.!

ಸಿದ್ದಾಪುರ: ಪ್ರಠ್ಯಕ್ರಮದಲ್ಲಿ ಬಂದ ಕೃಷಿ ಪಾಠ ಹಾಗೂ ‘ಸೀನ ಸೆಟ್ಟರು ನಮ್ಮ ಟೀಚರು’  ಪಾಠಗಳ ನೈಜ ಅನುಭವಕ್ಕಾಗಿ ಶಿಕ್ಷಕರು ಪ್ರಾರಂಭಿಸಿದ ಗದ್ದೆ ನಾಟಿ ಕಾರ್ಯಕ್ರಮ ಈಗ ಕೃಷಿ ಅಧ್ಯಯನವಾಗಿ ಬದಲಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರೀಯ ಪಠ್ಯಕ್ರಮದ ಭಾಗವಾಗಿ ವೃತ್ತಿ ಶಿಕ್ಷಣವನ್ನೂ ಸಹ ಶಾಲೆಯಲ್ಲಿ ಅಳವಡಿಸಿಕೊಂಡಂತಾಗಿದೆ.

ಹೌದು.! ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈ ವರ್ಷವೂ ಸಹ ಹೆಮಜೆನಿ ಮಜರೆಯ ಲೋಕೇಶ ಪದ್ಮನಾಭ ಗೌಡರ ಗದ್ದೆಯಲ್ಲಿ ನಾಟಿ ಮಾಡಿದ್ದಾರೆ. ಶಾಲೆಯ 5 ರಿಂದ 7 ನೇ ತರಗತಿಯ ಆಸಕ್ತ 20 ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ರೈತರಿಂದ ಗದ್ದೆ ನಾಟಿ ಕ್ಲಾಸ್.!

ಅಂದಾಜು 4 ಗುಂಟೆ ಭತ್ತದ ಕ್ಷೇತ್ರವನ್ನು ಒಂದುವರೆ ತಾಸಿನಲ್ಲಿ ನಾಟಿ ಮಾಡಿ ತಮ್ಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದರು. ರೈತರಾದ ಗೋವಿಂದ ಗಿರಿಯಾ ಗೌಡ ನಾಟಿ ಮಾಡುವ ವಿಧಾನವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಹೇಳಿಕೊಟ್ಟಂತೆ ಚಂದವಾಗಿ ನಾಟಿ ಮಾಡಿರುವುದು ಖುಶಿಯ ವಿಚಾರವಾಗಿದೆ.

ಸಸಿ ಬೆಳವಣಿಗೆ ವೀಕ್ಷಣೆ.!

ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಟಿಕಾರ್ಯದ ನಂತರ ಪ್ರತಿ 20 ದಿನಗಳಿಗೊಮ್ಮೆ ಕೊಯ್ಲಿಗೆ ಬರುವವರೆಗೂ ಸಸಿಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ವೀಕ್ಷಣೆ ಮಾಡುತ್ತಾರೆ. ಪ್ರತೀ ಬಾರಿಯೂ ತಪ್ಪದೇ ಈ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಿಕೊಂಡು ಬಂದಿದ್ದಾರೆ.

ಕೊಯ್ಲು ಮಾಡುವ ವಿದ್ಯಾರ್ಥಿಗಳು.!

ತಾವು ನೆಟ್ಟಿ ಮಾಡಿದ ಬೆಳೆದ ಪೈರನ್ನು ಕೊಯ್ಲು ಮಾಡುವುದರ ಜೊತೆ ಭತ್ತ ಸೆಳೆಯುವ ಕಾರ್ಯವನ್ನೂ ವಿದ್ಯಾರ್ಥಿಗಳು ಮಾಡುತ್ತಿರುವುದು ವಿಶೇಷವಾಗಿದೆ.

ಗ್ರಾಮೀಣ ಭಾಗದಲ್ಲಿ ಭತ್ತದ ಕೃಷಿ ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಶಾಲಾ ಮಕ್ಕಳಿಗೆ ಭತ್ತದ ಕೃಷಿಯ ಕುರಿತು ಸಂಪೂರ್ಣ ಜ್ಞಾನ ಸಿಗುವಂತೆ ಮಾಡಿರುವುದು ಹೆಮ್ಮೆಯ ಸಂಗತಿ.

ಪಾಠದಲ್ಲಿರುವ ಬಂದಿರುವ ವಿಷಯವನ್ನು ಪ್ರಾಯೋಗಿಕವಾಗಿ ಕಲಿತುಕೊಳ್ಳುವ ಅವಕಾಶ ನಮಗೆ ಲಭಿಸುತ್ತಿದೆ. ಭತ್ತದ ಕೃಷಿ ಕಾರ್ಯದ ನೈಜ ಅನುಭವ ಪಡೆದಿದ್ದೇನೆ.

– ಚಿನ್ಮಯ ವೆಂಕಟ್ರಮಣ ಗೌಡ, 6 ನೇ ತರಗತಿ ವಿದ್ಯಾರ್ಥಿ