ಹೊನ್ನಾವರ ನ. 25: ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಉಸ್ತುವಾರಿಯಲ್ಲಿ ಐಆರ್‌ಬಿ ನಡೆಸಿರುವ ಚತುಷ್ಪಥ ಕಾಮಗಾರಿ ಜನರಿಗೆ ಉಪಕಾರಿ ಮಾಡಿದ್ದಕ್ಕಿಂತ ಉಪದ್ರವ ಮಾಡಿದ್ದು ಹೆಚ್ಚು. ಹೊನ್ನಾವರ ನಗರದಲ್ಲಿ ಸರ್ವೀಸ್ ರಸ್ತೆ ಬಿಡಲಿಲ್ಲ. ನಗರದೊಳಗೆ ಹೋಗುವ ಉಪರಸ್ತೆಯನ್ನು ಸರಿಪಡಿಸಿಲ್ಲ. ಶರಾವತಿ ಸರ್ಕಲ್ ಬಳಿ ಕೆಳಗಿನಪಾಳ್ಯ ಕೇರಿಗೆ ಹೋಗಲು ಪಟ್ಟಣ ಪಂಚಾಯತ್ ಮೆಟ್ಟಿಲುಗಳನ್ನು ನಿರ್ಮಿಸಿ ಕೈ ಹಿಡಿದುಕೊಂಡು ಹೋಗಲು ರೇಲಿಂಗ್ ಮಾಡಿತ್ತು. ತಗ್ಗಿನಲ್ಲಿ 15-20 ಮನೆಗಳಿವೆ. ವಯೋವೃದ್ಧರಿಗೆ, ಮಕ್ಕಳಿಗೆ ಅನುಕೂಲವಾಗಲೆಂದು ಈ ವ್ಯವಸ್ಥೆ ಮಾಡಿತ್ತು. ಇದೇ ಸ್ಥಳದಲ್ಲಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯಿದೆ. ಹೊನ್ನಾವರ-ಕುಮಟಾಗಳಿಂದ 25 ಮಕ್ಕಳು ಬರುತ್ತಾರೆ. ಸಹಾಯವಿಲ್ಲದೇ ಇವರಿಗೆ ಸರಿ ನೆಲದಲ್ಲಿ ನಡೆಯಲು ಸಾಧ್ಯವಾಗುವುದಿಲ್ಲ. ಈ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಇದು ಉಪಯುಕ್ತವಾಗಿತ್ತು. ಐಆರ್‌ಬಿ ರಸ್ತೆ ವಿಸ್ತರಿಸಿ ಮೆಟ್ಟಿಲುಗಳನ್ನು, ರೇಲಿಂಗ್‌ಗಳನ್ನು ಮುಚ್ಚಿ ಹಾಕಿದೆ. ಈಗ ಇಳಿಜಾರಿನಲ್ಲಿ ನಡೆದು ಹೋಗುವಾಗ ಜನ ಬೀಳುತ್ತಾರೆ. ಸುಮಾರು ೫೦ ಅಡಿ ಆಳವಿದೆ. ಎದುರಿಗೆ ಮನೆ ಶಾಲೆ ಇದ್ದರೂ ೨ ಕಿ.ಮೀ. ಸುತ್ತಿ ಹಿಂಬಾಗಿಲಿನಿAದ ಜನರು ಮತ್ತು ಬುದ್ಧಿಮಾಂದ್ಯ ಮಕ್ಕಳು ಶಾಲೆಗೆ ಬರಬೇಕಾಗಿದೆ. ಈ ಅಮಾನವೀಯ ಕ್ರೂರ ನಿರ್ಲಕ್ಷ ಕ್ಷಮಾರ್ಹವಲ್ಲ. ತಕ್ಷಣ ಐಆರ್‌ಬಿ ಮೆಟ್ಟಿಲುಗಳನ್ನು ನಿರ್ಮಿಸಿ ಕೊಡಬೇಕು. ಇಲ್ಲವಾದರೆ ಬುದ್ಧಿಮಾಂದ್ಯ ಮಕ್ಕಳೊಂದಿಗೆ ಹೆದ್ದಾರಿಯಲ್ಲಿ ಕೂರುವುದಾಗಿ ಪಾಲಕರು ಹೇಳಿದ್ದಾರೆ.




