ದಾಂಡೇಲಿಯಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿ — ನಾಲ್ಕು ದಿನಗಳಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯ

ದಾಂಡೇಲಿ: ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದ್ದು, ಕಳೆದ ನಾಲ್ಕು ದಿನಗಳಲ್ಲಿ 10ಕ್ಕೂ ಹೆಚ್ಚು ಮಂದಿ ನಾಯಿ ದಾಳಿಗೆ ಗುರಿಯಾಗಿರುವ ಘಟನೆಗಳು ಸ್ಥಳೀಯರಲ್ಲಿ ಆತಂಕ ಉಂಟುಮಾಡಿವೆ.

ನಗರದ ಹಲವು ಪ್ರದೇಶಗಳಲ್ಲಿ ದಾಳಿಯ ಘಟನೆಗಳು ಕ್ರಮವಾಗಿ ದಾಖಲಾಗುತ್ತಿದ್ದು, ನಿನ್ನೆ ಒಂದೇ ದಿನ ಐದುಕ್ಕೂ ಹೆಚ್ಚು ಮಂದಿ ನಾಯಿಗಳ ಕಾಟಕ್ಕೆ ಒಳಗಾಗಿದ್ದಾರೆ. ದಾಳಿಗೊಳಗಾದವರಲ್ಲಿ ಮಕ್ಕಳೂ, ವಯೋವೃದ್ಧರೂ ಸೇರಿದ್ದು, ವೈಷ್ಣವಿ (14), ಹಜರತ್ (8), ನಾಗಮ್ಮ (5), ರೋಜಿ (70), ಪೆಟ್ರಿನಾ (60) ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಔಷಧಿ ನೀಡಿ ಮನೆಗೆ ತೆರಳುತ್ತಿದ್ದ ದಾಂಡೇಲಿ ಟಿಎಚ್‌ಒ ಅನೀಲ ಅವರ ಮೇಲೂ ನಾಯಿ ದಾಳಿ ಸಂಭವಿಸಿದ್ದು, ಅವರು ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ ಸುಮಾರು 2,000ಕ್ಕೂ ಹೆಚ್ಚು ಬೀದಿ ನಾಯಿಗಳು ಸಂಚರಿಸುತ್ತಿರುವುದರಿಂದ ಜನರು ಭಯಭೀತರಾಗಿ ಸಂಚರಿಸುವಂತಾಗಿದೆ. ಕಳೆದ ನಾಲ್ಕು ದಿನಗಳಿಂದ ಯಾವುದೇ ಕ್ರಮ ಕೈಗೊಳ್ಳದ ನಗರಸಭೆ ವಿರುದ್ಧ ಸಾರ್ವಜನಿಕರ ಅಸಮಾಧಾನ ತೀವ್ರಗೊಂಡಿದೆ. ಬೀದಿ ನಾಯಿಗಳ ಕಾಟ ನಿಯಂತ್ರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ನಗರಸಭೆಗೆ ಒತ್ತಾಯಿಸಿದ್ದಾರೆ.